

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಹಾಲಿವುಡ್‌ನ ಪ್ರಸಿದ್ಧ ಕಲಾವಿದರು ಹಾಗೂ ತಾಂತ್ರಿಕ ವರ್ಗದವರು ಬರುತ್ತಿರುವುದು ಇತ್ತೀಚೆಗೆ ಹೆಚ್ಚುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಅವಿನಾಶ್ ವಿಜಯ್‌ಕುಮಾರ್ ನಿರ್ದೇಶನದ ‘ಮೈ ಹೀರೋ’ ಚಿತ್ರದಲ್ಲಿ ಹಾಲಿವುಡ್ ನಟರಾದ ಎರಿಕ್ ರಾಬರ್ಟ್ಸ್ ಹಾಗೂ ಜಿಲಾನಿ ರೆಝ್ ಕಲಾಹ್ ನಟಿಸಿದ್ದರು. ಇದರ ಬೆನ್ನಲ್ಲೇ, ‘ಕಾಂತಾರ ಭಾಗ 1’ ಚಿತ್ರಕ್ಕೆ ಬಲ್ಗೇರಿಯಾ ಮೂಲದ ಟೋಡೊರ್ ಲಾಜಾರೋವ್ ಸಾಹಸ ನಿರ್ದೇಶನ ಮಾಡುತ್ತಿರುವುದು ಗೊತ್ತೇ ಇದೆ. ಇದೀಗ ಮತ್ತೊಂದು ಕನ್ನಡ ಸಿನಿಮಾಕ್ಕೆ ಹಾಲಿವುಡ್ ತಂತ್ರಜ್ಞರ ತಂಡ ಕೆಲಸ ಮಾಡುತ್ತಿದೆ. ಟೊರಾಂಟೋದ ‘ಮಾರ್ಝ್’ ಕಂಪನಿಯ ರಾಫೆಲ್ ಹಾಗೂ ಜಸ್ಟಿನ್ ಇಬ್ಬರು ಕನ್ನಡದ ‘45’ ಸಿನಿಮಾದ ವಿಎ್ಎಕ್ಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ‘45’ ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿ, ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳನ್ನು ಆರಂಭಿಸಿದೆ. ಈ ಚಿತ್ರವು ಆಧುನಿಕ ತಂತ್ರಜ್ಞಾನದೊಂದಿಗೆ ಮೂಡಿಬರುತ್ತಿದ್ದು, ವಿಎಫ್ಎಕ್ಸ್ ಗ್ರಾಫಿಕ್ ಹಾಗೂ ಸೌಂಡ್ ಮಿಕ್ಸಿಂಗ್‌ನಲ್ಲಿ ‘ಮಾರ್ಝ್’ ತಂಡ ಕೆಲಸ ಮಾಡುತ್ತಿದೆ.
ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದ ತಂಡ: ‘ಮಾರ್ಝ್’ ತಂಡವು ಹಾಲಿವುಡ್‌ನ ‘ಪರ್ಸಿ ಜಾಕ್ಸನ್’, ‘ಫಾರ್ ಆಲ್ ಮ್ಯಾನ್‌ಕೈಂಡ್’ ಸೇರಿ 150ಕ್ಕೂ ಅಧಿಕ ಸಿನಿಮಾಗಳಿಗೆ ವಿಎ್ಎಕ್ಸ್ ಕೆಲಸ ಮಾಡಿದೆ. ಅಲ್ಲದೇ, ಈ ತಂಡವು ಕಳೆದ 2023ರಲ್ಲಿ ಅತ್ಯುತ್ತಮ ವಿಶುವಲ್ ಎಫೆಕ್ಸ್ಟ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸಿದ್ದ ಟಾಪ್ ಐದು ಚಿತ್ರಗಳಲ್ಲಿ ಒಂದಾದ ‘ದ ಕ್ರಿಯೇಟರ್’ ಸಿನಿಮಾಗೂ ವಿಎಫ್ಎಕ್ಸ್ ಮಾಡಿತ್ತು. ಇದೀಗ ‘45’ ಚಿತ್ರದ ಮೂಲಕ ಭಾರತಕ್ಕೆ ಪದಾರ್ಪಣೆ ಮಾಡುತ್ತಿದೆ.