

|ಮಂಡಗದ್ದೆ ಪ್ರಕಾಶ್ಬಾಬು ಕೆ.ಆರ್.
ಹೋಳಿ ಎಂದರೆ ಕಾಮನೆಗಳನ್ನು ಸುಡುವ ಹಬ್ಬ. ಇಂದಿಗೂ ನಮ್ಮ ಗ್ರಾಮೀಣ ಕರ್ನಾಟಕದಲ್ಲಿ ಹೋಳಿ ಸಂಭ್ರಮ, ಉತ್ಸಾಹದಿಂದ ಆಚರಿಸಲಾಗುತ್ತದೆ. ಹೋಳಿ ಹಬ್ಬದ ಆಚರಣೆಯ ನೆಪದಲ್ಲಿ ವೈವಿಧ್ಯತೆಯ ಸೊಗಡು ಗಮನ ಸೆಳೆಯುತ್ತದೆ. ವೇದಗಳಲ್ಲಿ ವೇದಪುರುಷರನ್ನೂ ವಿವಿಧ ಬಣ್ಣಗಳಿಂದ ಗುರುತಿಸಲಾಗಿದೆ ಎಂದು ಗುರುಚರಿತ್ರೆಯಿಂದ ತಿಳಿಯುತ್ತದೆ. ಗುರುಚರಿತೆಯಲ್ಲಿ ನರಸಿಂಹ ಸರಸ್ವತಿಯವರು- ‘ಋಗ್ವೇದ ವೇದಪುರುಷನ ಬಣ್ಣ ಕೆಂಪು. ಯಜುರ್ವೆದ ಪುರುಷನ ಕಣ್ಣುಗಳು ಬಂಗಾರದಂತೆ ಹಳದಿ ಬಣ್ಣ ಹಾಗೂ ಉಳಿದ ಶರೀರದ ಭಾಗ ತಾಮ್ರವರ್ಣವಾಗಿದೆ.
ಸಾಮವೇದ ಪುರುಷನ ಬಣ್ಣವು ಶ್ವೇತವರ್ಣವಾಗಿದೆ. ಅಥರ್ವಣ ವೇದಪುರುಷನ ಬಣ್ಣವು ಕಪು್ಪ’ ಎಂದು ವಿವರಿಸಿ ದ್ದಾರೆ. ಋಗ್ವೇದದಲ್ಲಿ ಹೇಳಿರುವಂತೆ ಕಾಮವು ಮನಸ್ಸಿನ ಮೂಲಬೀಜ. ಅದು ಸಕ್ರಿಯವಾಗಿದ್ದಷ್ಟೂ ಮೊಳೆತು ಜಿಗಿಯುತ್ತಲೇ ಇರುತ್ತದೆ. ಬೆಳೆಯುತ್ತ ಬೆಳೆಯುತ್ತ ಬದುಕಿನ ಇತರ ಉದ್ದೇಶಗಳನ್ನು ಗೌಣವಾಗಿಸಿಬಿಡುತ್ತದೆ. ಮನುಷ್ಯನ ಜೀವನದ ಮುಖ್ಯ ಉದ್ದೇಶವೇ ಮೋಕ್ಷಪ್ರಾಪ್ತಿ. ಜೀವಿಯು ಜನನ-ಮರಣದ ಚಕ್ರದಿಂದ ತಪ್ಪಿಸಿಕೊಳ್ಳಲೆಂದೇ ಮಾನವ ಜನ್ಮವು ಒದಗಿಬರುತ್ತದೆ ಎಂದು ನಮ್ಮ ಪ್ರಾಚೀನ ಶಾಸ್ತ್ರಗಳು ಹೇಳುತ್ತವೆ. ಇದು ಆಗಬೇಕೆಂದರೆ ಕಾಮದ ಮೊಳಕೆಯನ್ನು ಚಿವುಟಿ ಹಾಕಬೇಕು. ಹೋಳಿ ಹಬ್ಬದಲ್ಲಿ ಕಾಮನ ಮೂರ್ತಿಯನ್ನು ದಹಿಸುವ ಆಚರಣೆಯಿದೆ. ಇದರ ಒಳಾರ್ಥ ನಮ್ಮೊಳಗಿನ ಕೆಟ್ಟ ಬಯಕೆ, ವ್ಯಾಮೋಹ, ವಿಕೃತ ಕಾಮನೆ ಯನ್ನು ಸುಡುವುದು ಎಂದು. ನಮ್ಮ ಅಂತರಂಗದಲ್ಲಿ ಕಾಮನ ದಹನವಾದಾಗ ಮಾತ್ರ ಮನಸ್ಸು ಶುದ್ಧವಾಗುತ್ತದೆ. ಇದೇ ಕಾಮದಹನದ ಉದ್ದೇಶ.
(ಲೇಖಕರು ಅಧ್ಯಾತ್ಮ ಚಿಂತಕರು)
|ಅಮರೇಶ ಬಿ. ಚರಂತಿಮಠ
ಹೋಲಿಕಾ ಎಂಬ ರಾಕ್ಷಸಿಯ ಸಂಹಾರ ಮತ್ತು ಪರಶಿವನ ಮೂರನೇ ಕಣ್ಣಿನಿಂದ ಭಸ್ಮವಾದ ಕಾಮದೇವನ ಕಥೆಗಳ ಪೌರಾಣಿಕ ಹಿನ್ನೆಲೆಯ ಹಬ್ಬವೇ ಹೋಳಿ ಹಬ್ಬ. ಬಾಗಲಕೋಟೆಯಲ್ಲಿ ಸತತ 5 ದಿನಗಳ ಕಾಲ (ಈಗ 3 ದಿನ) ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಬಾಗಲಕೋಟೆ ನಗರದಲ್ಲಿನ ಹೋಳಿ ಹಬ್ಬಕ್ಕೆ ಶತಮಾನಗಳ ಇತಿಹಾಸವೇ ಇದೆ. ಅಸ್ಪಶ್ಯತೆ ವಿರುದ್ಧದ ಹೋರಾಟದ ಪ್ರತೀಕವಾಗಿ ಆರಂಭವಾದ ಈ ಹಬ್ಬ ಸಮಕಾಲೀನ ರಾಜಮಹಾರಾಜರರ ಪ್ರಶಂಸೆಗೆ ಪಾತ್ರವಾಗಿತ್ತೆಂಬ ಪ್ರತೀತಿ ಇದೆ. ಈ ಹಬ್ಬ ಪ್ರಾರಂಭವಾಗುವುದು ಭಾರತ ಹುಣ್ಣಿಮೆಯಂದು, ಮೋಟಗಿ ಬಸವೇಶ್ವರನ ತೇರು ಎಳೆದ ನಂತರ. ಅಂದು ರಾತ್ರಿಯೇ ಹೊಸಪೇಟೆಯ (ನಗರದ ಒಂದು ಪ್ರದೇಶ) ತುರಾಯಿ ಹಲಗೆ ಪೂಜೆಯಾಗುತ್ತದೆ. ಮುಂದೆ ಶಿವರಾತ್ರಿ ಅಮವಾಸ್ಯೆಯ ಮರುದಿನದಿಂದಲೇ ಹಲಗೆಗಳ ಅಬ್ಬರದ ನಾದಗಳ ಮುಖಾಂತರ ಹಬ್ಬದ ಸಂಭ್ರಮಕ್ಕೆ ಅಧಿಕೃತವಾಗಿ ಚಾಲನೆ ದೊರೆಯುತ್ತದೆ.
ಹುಣ್ಣಿಮೆ ದಿನ ಮಧ್ಯರಾತ್ರಿ ಕಾಣುವ ಹುಬ್ಬಾ ನಕ್ಷತ್ರದ ದರ್ಶನದ ತರುವಾಯ ಬಾಬುದಾರರು ಹೊನ್ಯಾಳ ಸಾಹುಕಾರರ ವಾಡೆಯಿಂದ ನಿಶಾನೆಗಳನ್ನು ಹಿಡಿದು ಒಂದು ತಟ್ಟೆಯಲ್ಲಿ ತಾಂಬೂಲ ಸಮೇತ ಖಾತೆದಾರರಿಗೆ ನೀಡುತ್ತಾರೆ. ಅವರಿಂದ ಅಗ್ನಿಯನ್ನು ಪಡೆದು ನಸುಕಿನಜಾವ ಮೊದಲು ಕಿಲ್ಲಾದಲ್ಲಿ ಕಾಮದಹನ ಮಾಡಲಾಗುತ್ತದೆ. ತದನಂತರ ಹಲಗೆ ಮತ್ತು ಹಿಮ್ಮೇಳಗಳ ಸಮೇತ ನಗರದ ಇತರ ಓಣಿಗಳಲ್ಲಿ ಕಾಮದಹನ ನಡೆಯುತ್ತದೆ. ಮುಂದುವರಿದು ಸೋಗಿನ ಕಾರ್ಯಕ್ರಮ ಆರಂಭವಾಗುತ್ತದೆ. ‘ಸೋಗು’ ಎಂಬುದು ವಿಶಿಷ್ಟ ರೀತಿಯ ಮೆರವಣಿಗೆ. ಈ ಮೆರವಣಿಗೆಯಲ್ಲಿ ಯುವಕ, ಯುವತಿಯರು, ಮಕ್ಕಳು ಪೌರಾಣಿಕ ವೇಶಭೂಶಣ ಧರಿಸಿ ಎತ್ತಿನಬಂಡೆಗಳ ಮುಲಕ ಎಲ್ಲ ಓಣಿಗಳಲ್ಲಿ ಸಂಚರಿಸುತ್ತ ಭಾತೃತ್ವ, ಸೌಹಾರ್ದ, ವೀರಪರಂಪರೆಗಳನ್ನು ಪ್ರಚುರಪಡಿಸುತ್ತಾರೆ. ಮಾರನೇ ದಿವಸದಿಂದ ಮೂರು ದಿನ ಬಣ್ಣದ ಆಟದ ಸಂಭ್ರಮ, ಬೆಳಗ್ಗೆಯಿಂದ ಸಂಜೆಯವರೆಗೆ ಗರಿಗೆದರುತ್ತದೆ.
ಮೊದಲನೆಯ ದಿನ ಕಿಲ್ಲಾ ಓಣಿಯಲ್ಲಿ, ಎರಡನೆಯ ದಿನ ಹಳಪೇಟೆ, ವೆಂಕಟಪೇಟೆ ಮತ್ತು ಜೈನಪೇಟೆಯಲ್ಲಿ, ಮೂರನೇಯ ದಿನ ಹೊಸಪೇಟೆಯಲ್ಲಿ ಅತ್ಯಾಕರ್ಷಕ ಬಣ್ಣದಾಟ ನಡೆಯುತ್ತದೆ. ಇತರ ಜಿಲ್ಲೆಗಳಿಂದ ಮತ್ತು ಹೊರರಾಜ್ಯದ ಜನರು ಈ ವೈಭವವನ್ನು ಕಣ್ಣುತುಂಬಿಕೊಳ್ಳಲು ಬಾಗಲಕೋಟಗೆ ಅಗಮಿಸುತ್ತಾರೆ. ಸ್ಥಳೀಯರು ದೈನಂದಿನ ಜೀವನದ ಒತ್ತಡ, ಬೀಗುಮಾನ ಬಿಟ್ಟ ಬಣ್ಣದಾಟದಲ್ಲಿ ಮಿಂದು ಆನಂದಿಸುತ್ತಾರೆ. ಒಟ್ಟಿನಲ್ಲಿ ಹೋಳಿ ಹಬ್ಬವೆಂದರೆ ಅದು ಬಾಗಲಕೋಟೆಯ ಹೋಳಿ ಎಂಬ ನಾಣ್ಣುಡಿ ಅಜರಾಮರವಾಗಲಿ ಎಂಬುದು ಎಲ್ಲರ ಸದಾಶಯ.
(ಲೇಖಕರು ಸಹಾಯಕ ಪ್ರಾಧ್ಯಾಪಕರು)