

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಶನಿವಾರ ಹೋಳಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಶಿವಮೊಗ್ಗದಲ್ಲಿ ರೇನ್ ಡಾನ್ಸ್ ಪ್ರಮುಖ ಆಕರ್ಷಣೆಯಾಗಿತ್ತು. ಚಿಣ್ಣರು, ಯುವಕರು, ಯುವತಿಯರು ವಯಸ್ಸಿನ ಅಂತರವಿಲ್ಲದೆ ಪರಸ್ಪರ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಭ್ರಾತೃತ್ವದ ಕೊಂಡಿ ಬೆಸೆಯುವ ಹಬ್ಬಗಳಲ್ಲಿ ಒಂದಾದ ಹೋಳಿ ಹಬ್ಬ ನಗರದ ಜನತೆಯ ಮನಸ್ಸನ್ನು ಓಕುಳಿಯಲ್ಲಿ ತೇಲಿಸಿತು. ಹಿರಿಯರು ಕಿರಿಯರೆನ್ನದೆ ಭಾವೈಕ್ಯದಿಂದ ಕೂಡಿ ಬಣ್ಣದ ಜಗತ್ತಿನಲ್ಲಿ ಮಿಂದೆದ್ದರು. ಗಾಂಧಿಬಜಾರ್, ದುರ್ಗಿಗುಡಿ, ವಿನೋಬನಗರ, ಕೋಟೆ ರಸ್ತೆ, ಶರಾವತಿ ನಗರ, ಹೊಸಮನೆ ಸೇರಿ ವಿವಿಧ ಬಡಾವಣೆಗಳಲ್ಲಿ ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಆಚರಿಸಿದರು.
ಗಾಂಧಿಬಜಾರ್, ರವಿವರ್ಮ ಬೀದಿ, ಕುಂಬಾರ ಬೀದಿ ಸೇರಿದಂತೆ ಹಲವೆಡೆ ಮನ್ಮಥನನ್ನು ಪ್ರತಿಷ್ಠಾಪಿಸಲಾಗಿತ್ತು. ಮಧ್ಯಾಹ್ನ ಕಾಮ ದಹನದ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು. ಪೊಲೀಸರ ಕಟ್ಟೆಚ್ಚರದ ನಡುವೆ ಯುವಕ, ಯುವತಿಯರು ಜೋರಾಗಿ ಕೂಗುತ್ತ, ಬೈಕ್ ರೈಡ್ ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ಕಡೆ ಗುಂಪುಗುಂಪಾಗಿ ಮಡಕೆ ಒಡೆಯುವುದು, ಹಾಡು ಹಾಕಿಕೊಂಡು ಡಾನ್ಸ್ ಮಾಡುವುದು ಕಂಡುಬಂತು. ಪುಟ್ಟ ಮಕ್ಕಳು ಪರಸ್ಪರ ಬಣ್ಣದ ನೀರು ಎರಚಿ ಖುಷಿಪಟ್ಟರು.
ಸೀನಪ್ಪ ಶೆಟ್ಟಿ ವೃತ್ತದ ಹೋಳಿ ಆಚರಣೆ ಕಣ್ತುಂಬಿಕೊಳ್ಳಲು ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಎಂ.ಜಿ.ಪ್ಯಾಲೇಸ್, ಶ್ರೀನಿಧಿ ಕಾಂಪ್ಲೆಕ್ಸ್ ಮುಂತಾದ ದೊಡ್ಡ ಕಟ್ಟಡಗಳ ಬಾಲ್ಕನಿಯಲ್ಲಿ ನಿಂತು ಜನರು ಸಂಭ್ರಮವನ್ನು ಕಣ್ತುಂಬಿಕೊಂಡರು. ಮೈತುಂಬ ಬಣ್ಣ ಹಚ್ಚಿಕೊಂಡ ಜನರು, ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಹೋಳಿ ಹಬ್ಬದ ಸಂಭ್ರಮದ ನಡುವೆ ಯಾವುದೆ ರೀತಿ ಅಡಚಣೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.