18 ದಿನದ ಬಾಹ್ಯಾಕಾಶ ಯಾತ್ರೆ ಬಳಿಕ ಕುಟುಂಬದ ಭೇಟಿ: ಪತ್ನಿ, ಪುತ್ರನನ್ನು ಬಿಗಿದಪ್ಪಿ ಶುಭಾಂಶು ಶುಕ್ಲಾ ಭಾವುಕ! Shubhanshu Shukla

Shubhanshu Shukla
Published on

Shubhanshu Shukla : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) 18 ದಿನಗಳ ಯಾತ್ರೆಯನ್ನು ಮುಗಿಸಿ, ಯಶಸ್ವಿಯಾಗಿ ಭೂಮಿಗೆ ಬಂದಿಳಿದಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ತಮ್ಮ ಪತ್ನಿ ಕಾಮ್ನಾ ಶುಕ್ಲಾ ಮತ್ತು ಆರು ವರ್ಷದ ಮಗ ಕಿಯಾಶ್ ಶುಕ್ಲಾ ಅವರನ್ನು ಭೇಟಿಯಾಯಾಗಿದ್ದಾರೆ. ಈ ಒಂದು ಕ್ಷಣ ತುಂಬಾ ಭಾವುಕವಾಗಿತ್ತು.

ಕಾಮ್ನಾ ಮತ್ತು ಕಿಯಾಶ್ ಈಗಾಗಲೇ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಶುಕ್ಲಾ ಅವರ ಜೊತೆಯಲ್ಲಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಶುಕ್ಲಾ ಅವರು ತಮ್ಮ ಕುಟುಂಬವನ್ನು ನೋಡಿದ್ದು ಇದೇ ಮೊದಲು. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಭಾವುಕರಾಗಿ ಬರೆದುಕೊಂಡಿರುವ ಶುಕ್ಲಾ, ನಿಜಕ್ಕೂ ಇದು ಸವಾಲಿನದ್ದಾಗಿತ್ತು. ಭೂಮಿಗೆ ಹಿಂತಿರುಗಿ ನನ್ನ ಕುಟುಂಬವನ್ನು ನನ್ನ ತೋಳುಗಳಲ್ಲಿ ಬಿಗಿದಪ್ಪುವುದು ಮನೆಯಂತೆ ಭಾಸವಾಯಿತು ಎಂದು ಹೇಳಿದ್ದಾರೆ. ಅಲ್ಲದೆ, ಮಾನವ ಬಾಹ್ಯಾಕಾಶ ಹಾರಾಟದ ಕಾರ್ಯಾಚರಣೆಗಳು ಮಾಂತ್ರಿಕವಾಗಿವೆ ಆದರೆ, ಅವುಗಳನ್ನು ಮನುಷ್ಯರು ಇನ್ನಷ್ಟು ಮಾಂತ್ರಿಕವಾಗಿ ಮಾಡಿದ್ದಾರೆ ಎಂದು ಬರೆದಿದ್ದಾರೆ.

ಶುಭಾಂಶು ಶುಕ್ಲಾ ಈಗ ಸುರಕ್ಷಿತವಾಗಿ ಭೂಮಿಗೆ ಮರಳಿರುವುದರಿಂದ, ನಮ್ಮ ತಕ್ಷಣದ ಗಮನವು ಅವರ ಪುನರ್ವಸತಿ ಮತ್ತು ಭೂಮಿಯ ಮೇಲಿನ ಜೀವನಕ್ಕೆ ಅವರು ಸರಾಗವಾಗಿ ಹೊಂದಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಇರುತ್ತದೆ ಎಂದು ಕಾಮ್ನಾ ಹೂಸ್ಟನ್‌ನಿಂದ ಪಿಟಿಐಗೆ ತಿಳಿಸಿದ್ದಾರೆ. ಈ ಅದ್ಭುತ ಪ್ರಯಾಣದ ನಂತರ ಮತ್ತೆ ಒಂದಾಗುವುದು ನಮಗೆ ಒಂದು ಸಂಭ್ರಮ ಎಂದು ಕಾಮ್ನಾ ಹೇಳಿದ್ದಾರೆ.

ಶುಭಾಂಶು ಅವರ ಬಾಹ್ಯಾಕಾಶ ಯಾತ್ರೆಯ ನಂತರ, ಅವರ ಪತ್ನಿ ಕಾಮ್ನಾ, ತಮ್ಮ ಪತಿಗೆ ಮನೆ ರುಚಿ ಸವಿಯುವುದಕ್ಕಾಗಿ ಈಗಾಗಲೇ ಅವರ ನೆಚ್ಚಿನ ಕೆಲವು ಭಕ್ಷ್ಯಗಳನ್ನು ತಯಾರಿಸುತ್ತಿದ್ದಾರೆ. ಬಾಹ್ಯಾಕಾಶದಲ್ಲಿದ್ದಾಗ ಮನೆಯಲ್ಲಿ ತಯಾರಿಸಿದ ಊಟವನ್ನು ಎಷ್ಟು ತಪ್ಪಿಸಿಕೊಂಡಿದ್ದಿರಬೇಕು ಎಂದು ನನಗೆ ತಿಳಿದಿದೆ ಎಂದು ಕಾಮ್ನಾ ಹೇಳಿದ್ದಾರೆ.

ಅಂದಹಾಗೆ, ಐತಿಹಾಸಿಕ ಬಾಹ್ಯಾಕಾಶ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಜುಲೈ 15ರಂದು ಭೂಮಿಗೆ ಬಂದಿಳಿದರು. ಆಕ್ಸಿಯಮ್​-4 ಸಿಬ್ಬಂದಿಯನ್ನು ಹೊತ್ತ ಸ್ಪೇಷ್​ ಎಕ್ಸ್​ ಗ್ರೇಸ್​ ಕ್ಪಾಪ್ಸುಲ್​ ಸ್ಯಾನ್​ ಡಿಯಾಗೋ ಬಳಿಯ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಯಶಸ್ವಿಯಾಗಿ ಇಳಿಯಿತು.

ಭಾರತೀಯ ವಾಯುಪಡೆಯ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಕ್ಲಾ, 1984 ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾರ ಬಳಿಕ ಬಾಹ್ಯಾಕಾಶಕ್ಕೆ ಭೇಟಿ ನೀಡಿದ ಎರಡನೇ ಭಾರತೀಯನೆಂಬ ದಾಖಲೆ ಸೃಷ್ಟಿಸಿದ್ದಾರೆ. ಈ ಕಾರ್ಯಾಚರಣೆಗೆ ಭಾರತ ಸುಮಾರು 70 ಮಿಲಿಯನ್ ಡಾಲರ್​ ವ್ಯಯಿಸಿದೆ. ಈ ಒಂದು ಐತಿಹಾಸಿಕ ಭೇಟಿಗೆ ನಾಸಾ ಮತ್ತು ಇಸ್ರೋಗೆ ಮಧ್ಯವರ್ತಿಯಾಗಿ ಖಾಸಗಿ ಬಾಹ್ಯಾಕಾಶ ಕಂಪನಿ ಆಕ್ಸಿಯಮ್ ಸ್ಪೇಸ್ ಕೆಲಸ ಮಾಡಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಡಾಕಿಂಗ್ ಮಾಡಿದಾಗಿನಿಂದ ಸುಮಾರು 12.2 ಮಿಲಿಯನ್ ಕಿಲೋಮೀಟರ್‌ಗಳನ್ನು ಕ್ರಮಿಸಿ ಭೂಮಿಯ ಸುತ್ತ ಸರಿಸುಮಾರು 433 ಗಂಟೆಗಳು, 18 ದಿನಗಳು ಮತ್ತು 288 ಕಕ್ಷೆಗಳನ್ನು ಸುತ್ತಿದ ಬಳಿಕ ಆಕ್ಸಿಯಮ್ ಮಿಷನ್ 4 (ಆಕ್ಸ್-4) ಸಿಬ್ಬಂದಿ ಅಧಿಕೃತವಾಗಿ ಮನೆಗೆ ಮರಳಿದ್ದಾರೆ.

ಕ್ಯಾಪ್ಸುಲ್​ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಪ್ರಯಾಣಿಸಲು ಸುಮಾರು 22.5 ಗಂಟೆಗಳನ್ನು ತೆಗೆದುಕೊಂಡಿತು. ಗ್ರೂಪ್ ಕ್ಯಾಪ್ಟನ್ ಶುಕ್ಲಾ ಜೊತೆಗೆ ಅಮೆರಿಕದ ಗಗನಯಾತ್ರಿ ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ಸ್ಪೆಷಲಿಸ್ಟ್‌ಗಳಾದ ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಕೂಡ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಐಎಸ್‌ಎಸ್‌ನಲ್ಲಿದ್ದಾಗ, ಶುಕ್ಲಾ ಅವರು ಭಾರತದ 7 ನಿರ್ದಿಷ್ಟ ಮೈಕ್ರೋಗ್ರಾವಿಟಿ ಪ್ರಯೋಗಗಳನ್ನು ನಡೆಸಿದರು. ಇದು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಭವಿಷ್ಯದ ಗ್ರಹ ಕಾರ್ಯಾಚರಣೆಗಳು ಮತ್ತು ದೀರ್ಘಾವಧಿಯ ಬಾಹ್ಯಾಕಾಶ ವಾಸಕ್ಕಾಗಿ ನಿರ್ಣಾಯಕ ಡೇಟಾವನ್ನು ಉತ್ಪಾದಿಸಲು ಈ ಪ್ರಯೋಗಗಳನ್ನು ವಿನ್ಯಾಸಗೊಳಿಸಲಾಗಿತ್ತು. ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಗ್ರೂಪ್ ಕ್ಯಾಪ್ಟನ್ ಶುಕ್ಲಾ ಈಗ ಸುಮಾರು ಒಂದು ವಾರದ ವೈದ್ಯಕೀಯ ಪುನರ್ವಸತಿಗೆ ಒಳಗಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net