

ಮೂತ್ರ ಮಾಡಲು ಸರಿಯಾದ, ಶುಚಿಯಾದ ಸ್ಥಳ ಸಿಗುವುದಿಲ್ಲ ಎಂದು ಹೆದರಿಕೊಂಡು ನೀರನ್ನೇ ಕಡಿಮೆ ಕುಡಿದಾಗ ಇಂತಹ ಫಜೀತಿ ಎದುರಾಗುತ್ತದೆ. ನೀರನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೂ ಮೂತ್ರಾಲಯಗಳು ಸ್ವಚ್ಛವಾಗಿಲ್ಲದೆ ಇದ್ದಾಗ ಮೂತ್ರದ ಸೋಂಕಿನಿಂದ ಬಳಲುವುದು ಸರ್ವೆಸಾಮಾನ್ಯ. ಶಾಲೆ, ಕಾಲೇಜು, ಕಚೇರಿಗಳಲ್ಲಿ ಸ್ವಚ್ಛ ಮೂತ್ರಾಲಯದ ಲಭ್ಯತೆಯ ಕಾರಣದಿಂದ ಮೂತ್ರಮಾಡಲು ಅಂಜಿಕೊಂಡು ನೀರು ಕಡಿಮೆ ಕುಡಿದಾಗಲೂ ಇದೇ ಪರಿಣಾಮವನ್ನು ಎದುರಿಸಬೇಕಾಗುತ್ತದೆ.
ಒಮ್ಮೆ ಮೂತ್ರದ ಸೋಂಕು ಆಯಿತೆಂದರೆ ಮತ್ತೆ ಹಲವಾರು ತಿಂಗಳುಗಳ ಕಾಲ ಪದೇಪದೇ ಸೋಂಕಿನಿಂದ ಬಳಲಿ ಸುಸ್ತಾಗುವುದನ್ನು ನೋಡುತ್ತೇವೆ. ಅದೆಷ್ಟೋ ಬಾರಿ ಪ್ರಯಾಣಿಸಲು ಬಸ್ಸಿಗಾಗಿ ಬಹಳ ಹೊತ್ತು ಕಾಯುತ್ತಿದ್ದರೂ ಬಸ್ಸೇ ಬರುವುದಿಲ್ಲ. ಕಾದುಕಾದು ಸಾಕಾಗಿ ಹೋಗುತ್ತದೆ. ಒಮ್ಮೆ ಬಸ್ಸು ಬಂತೆಂದರೆ ಅದರ ಹಿಂದೆ ಸಾಲುಸಾಲಾಗಿ ಬಸ್ಸುಗಳು ಬರಲು ಆರಂಭಿಸುತ್ತವೆ! ಮೂತ್ರದ ಸೋಂಕಿನ ಸಮಸ್ಯೆಗಳೆಂದರೂ ಹೀಗೆಯೇ! ಒಮ್ಮೆ ಬಂತೆಂದರೆ ಸಾಕು ಸಾಲುಸಾಲಾಗಿ ಬಂದೆರಗುತ್ತವೆ. ಅಪರಿಚಿತ ಸ್ಥಳ, ಸಾರ್ವಜನಿಕ ಮೂತ್ರಾಲಯ ಹಾಗೂ ಅನ್ಯ ಪ್ರದೇಶಗಳಿಗೆ ಭೇಟಿ ನೀಡಿದಾಗ ಇದೇ ಕಾರಣದಿಂದ ಮೂತ್ರವಿಸರ್ಜನೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ನೀರು ಸರಿಪ್ರಮಾಣದಲ್ಲಿ ಕುಡಿಯಬೇಕು, ಶುದ್ಧ ನೀರನ್ನೇ ಕುಡಿಯಬೇಕು, ಸ್ವಚ್ಛ ಸ್ಥಳದಲ್ಲೇ ಮೂತ್ರಿಸಬೇಕು. ಈ ಮೂರು ತತ್ತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.
ಶರೀರದ ಮಲಗಳಲ್ಲಿ ಒಂದಾದ ಮೂತ್ರವನ್ನು ವಿಸರ್ಜಿಸಲು ಕಷ್ಟವಾಗುವುದಕ್ಕೆ ಮೂತ್ರಕೃಛ್ರ ಎಂದು ಹೆಸರು. ಮೂತ್ರ ಮಾಡುವಾಗ ಮೂತ್ರಾಶಯ ಅಥವಾ ಮೂತ್ರನಾಳದಲ್ಲಿ ನೋವು ಹಾಗೂ ಉರಿ ಉಂಟಾಗಿ ಹನಿಹನಿಯಾಗಿ ಕಷ್ಟದಿಂದ ಮೂತ್ರ ಬಂದರೆ ಅದು ಮೂತ್ರಕೃಛ್ರ. ಮೂತ್ರ ಮಾರ್ಗದಲ್ಲಿ ಏನಾದರೂ ತಡೆ ಅಥವಾ ಹೊರಗಿನ ಕಾರಣಗಳಿಂದ ಮೂತ್ರಬಾಧೆ ಉಂಟಾಗುತ್ತದೆ. ಕೆಲವರು ದೇಹವು ಗಟ್ಟಿಮುಟ್ಟಾಗಿರ ಬೇಕೆಂದು ಮಿತಿಮೀರಿ ಅತಿಯಾಗಿ ವ್ಯಾಯಾಮವನ್ನು ಮಾಡುತ್ತಿರು ತ್ತಾರೆ. ಇದರಿಂದಲೂ ಅಹಿತಕರ ಮೂತ್ರಪ್ರವೃತ್ತಿ ಉಂಟಾಗುತ್ತದೆ.
ತೀಕ್ಷ್ಣಗುಣದ ಅಥವಾ ದೇಹಕ್ಕೆ ಒಗ್ಗದ ಔಷಧಗಳ ಸೇವನೆಯೂ ಇನ್ನೊಂದು ಕಾರಣ. ಒಣಗಿರುವ ಆಹಾರ ವ್ಯಂಜನಗಳು, ಅಡುಗೆ ಮಾಡಿ ತಯಾರಿಸಿ ಬಹುಸಮಯ ಕಳೆದ ಹಳೆ ಆಹಾರ, ಶುಷ್ಕ ಗುಣದ ಪದಾರ್ಥಗಳಿಂದ ಸಿದ್ಧಗೊಳಿಸಿದ ಆಹಾರ ಸೇವನೆಯಿಂದಲೂ ಮೂತ್ರಬಾಧೆ ಉಂಟಾಗುತ್ತದೆ. ನಿತ್ಯ ಮದ್ಯಸೇವನೆ, ಅತಿಯಾದ ಲೈಂಗಿಕ ಕ್ರಿಯೆ, ವಾಹನಗಳಲ್ಲಿ ವೇಗವಾಗಿ, ಗಡುಸಾಗಿ ಪ್ರತಿನಿತ್ಯ ಸಂಚರಿಸುವುದು, ಹೊತ್ತುಗೊತ್ತಿ ಲ್ಲದೆ ಆಗಾಗ ಅತಿಯಾದ ಆಹಾರ ಸೇವಿಸುವುದು, ತಿಂದ ಆಹಾರ ಪಚನವಾಗದೆ ಅಜೀರ್ಣವಾಗಿರುವುದು ಇವೆಲ್ಲವೂ ಕಷ್ಟಕರ ಮೂತ್ರಕ್ಕೆ ಕಾರಣವಾಗುತ್ತವೆ ಎನ್ನುತ್ತದೆ ಆಯುರ್ವೆದ. ತಾಳತಪ್ಪಿದ ದೋಷಗಳು ಮೂತ್ರವಹ ಸಂಸ್ಥಾನದ ಅವಯವಗಳಿಗೆ ಒತ್ತಡ ಹೇರಿ ದೂಷಿಸಿ ಕಷ್ಟಕರ ಮೂತ್ರ ಉಂಟಾಗುತ್ತದೆ.
ಎಂಟು ವಿಧವಾದ ಮೂತ್ರಬಾಧೆಯ ಲಕ್ಷಣಗಳನ್ನು ತಿಳಿದುಕೊಳ್ಳುವುದು ಅಪೇಕ್ಷಣೀಯ. ವಾತಜ ಮೂತ್ರಕೃಛ್ರ : ತೊಡೆಸಂದು, ಮೂತ್ರಾಶಯ, ಮೂತ್ರನಾಳಗಳಲ್ಲಿ ತೀವ್ರ ನೋವು ಉಂಟಾಗಿ ಆಗಾಗ ಸ್ವಲ್ಪವೇ ಪ್ರಮಾಣದಲ್ಲಿ ಮೂತ್ರವಾಗುತ್ತದೆ.
ಪಿತ್ತಜ ಮೂತ್ರಕೃಛ್ರ : ಹಳದಿ ಬಣ್ಣದ, ರಕ್ತದಿಂದ ಕೂಡಿದ್ದು, ನೋವು, ಉರಿಯೊಂದಿಗೆ ಆಗಾಗ ಮೂತ್ರವಾಗುವುದು.
ಕಫಜ ಮೂತ್ರಕೃಛ್ರ : ಮೂತ್ರನಾಳಗಳಲ್ಲಿ ಗುರುತ್ವ, ಊತವಾಗಿ ಲೋಳೆಯೊಂದಿಗೆ ಮೂತ್ರಬರುತ್ತದೆ.
ತ್ರಿದೋಷಜ ಮೂತ್ರಕೃಛ್ರ : ಮೂರೂ ದೋಷಗಳ ಮೂತ್ರಬಾಧೆಯ ಲಕ್ಷಣಗಳಿಂದ ಮಿಳಿತವಾಗಿರುತ್ತದೆ. ಚಿಕಿತ್ಸೆಗೆ ಅತ್ಯಂತ ಕಷ್ಟಕರವಾಗಿರುತ್ತದೆ.
ಅಭಿಘಾತಜ ಮೂತ್ರಕೃಛ್ರ : ಬಾಹ್ಯ ವಸ್ತುಗಳ ಆಘಾತದಿಂದ, ಗಾಯಗಳಿಂದ, ಸೂಕ್ಷ್ಮಕ್ರಿಮಿಗಳ ಸೋಂಕಿನಿಂದ, ಹೊರಗಿನ ಅಥವಾ ದೇಹದೊಳಗಿನ ಕಾರಣಗಳಿಂದಾಗಿ ತೀವ್ರ ನೋವಿನಿಂದ ಮೂತ್ರಪ್ರವೃತ್ತಿಯಾಗುತ್ತದೆ. ಪುರುಷಗ್ರಂಥಿಯ ಊತದ ತೊಂದರೆ ಇದ್ದಾಗ ಅದರಿಂದ ಮೂತ್ರನಾಳದ ಮೇಲೆ ಒತ್ತಡವುಂಟಾಗಿಯೂ ಮೂತ್ರಪ್ರವಾಹದಲ್ಲಿ ತೊಡಕುಂಟಾಗುತ್ತದೆ. ಮೂತ್ರಾಶಯ, ಮೂತ್ರನಾಳಗಳ ಅಕ್ಕಪಕ್ಕದಲ್ಲಿ ಬೆಳೆದಿರುವ ಅರ್ಬುದಗಳು, ದುರ್ವಂಸಗಳು ಕೂಡಾ ಮೂತ್ರವು ಸಲೀಸಾಗದಂತೆ ತಡೆಯುತ್ತವೆ.
ಶಕೃತ್ ಬಂಧಜ ಮೂತ್ರಕೃಛ್ರ : ಅಪಾನವಾತದಿಂದ ಮಲಪ್ರವ್ರತ್ತಿಗೆ ತಡೆಯುಂಟಾಗಿ ಗಟ್ಟಿಯಾಗುತ್ತದೆ. ಇದರಿಂದ ಮೂತ್ರ ಸಂಬಂಧೀ ಅವಯವಗಳ ಮೇಲೆ ಒತ್ತಡವುಂಟಾಗಿ ಹೊಟ್ಟೆಯುಬ್ಬರ, ತೀವ್ರ ನೋವು, ಮೂತ್ರ ತಡೆಗಳಿಂದ ಕೂಡಿ ಕಷ್ಟದಲ್ಲಿ ಮೂತ್ರ ವಿಸರ್ಜನೆಯಾಗುತ್ತದೆ.
ಅಶ್ಮರೀ/ ಶರ್ಕರಾಜ ಮೂತ್ರಕೃಛ್ರ : ಮೂತ್ರಕಲ್ಲು ಅಥವಾ ಅದರ ಚಿಕ್ಕ ಹರಳುಕಲ್ಲುಗಳಿಂದ ಮೂತ್ರನಾಳಗಳಲ್ಲಿ ತಡೆ, ಮೂತ್ರಕಲ್ಲು ಹೊರಹೋಗುವಾಗ ತೀವ್ರವಾದ ನೋವು, ಎದೆನೋವು, ನಡುಕ, ಮೂತ್ರಪಿಂಡಗಳಲ್ಲಿ ನೋವು, ಹಸಿವೆ ಇಲ್ಲದಿರುವುದು, ಎಚ್ಚರ ತಪ್ಪುವುದು ಉಂಟಾಗಬಹುದು.
ಶುಕ್ರಜ ಮೂತ್ರಕೃಛ್ರ : ದೂಷಿತವಾಗಿರುವ ವೀರ್ಯವು ಮೂತ್ರದೊಂದಿಗೆ ಹೊರಹೋಗುವಾಗ ಮೂತ್ರಾಶಯ ಹಾಗೂ ಮೂತ್ರನಾಳಗಳಲ್ಲಿ ವೇದನೆಯಾಗಿ ಮೂತ್ರವಿಸರ್ಜನೆಯು ಕಷ್ಟಕರವಾಗುವುದು. ಈ ಎಲ್ಲಾ ಕಷ್ಟಗಳ ಸಮರ್ಪಕ ಪರಿಹಾರಕ್ಕೆ ಆಯುರ್ವೆದದ ಸೂಕ್ತ ಚಿಕಿತ್ಸೆ ಅವಶ್ಯವಷ್ಟೇ ಅಲ್ಲ, ಅನಿವಾರ್ಯ.
(ಪ್ರತಿಕ್ರಿಯಿಸಿ: vvsudina@gmail.com)