ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಿ

Published on

ಹೊಳೆನರಸೀಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಜನ್ಮ ದಿನಾಚರಣೆಯನ್ನು ಕ್ರಮವಾಗಿ ಏ.5 ಮತ್ತು 14ರಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಚರಿಸುವ ಕುರಿತು ಪೂರ್ವಭಾವಿ ಸಭೆಯು ತಾಲೂಕು ದಂಡಾಧಿಕಾರಿ ವೈ.ಎಂ.ರೇಣುಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.

ಎಸ್‌ಸಿ/ಎಸ್‌ಟಿ ಹಿತರಕ್ಷಣಾ ಸಮಿತಿ ಸಭೆಯನ್ನು ಕರೆದು ಹಲವು ವರ್ಷಗಳೇ ಕಳೆದಿದ್ದು ದಲಿತರ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೌರಕಾರ್ಮಿಕರ ಮುಖಂಡ ವರ್ಮ, ಸಭೆಯಲ್ಲಿ ಗಮನ ಸೆಳೆದರು. ಇದಕ್ಕೆ ಕೆಲವು ಜೆಡಿಎಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಗಮನಹರಿಸುವಂತೆ ದಲಿತ ಮುಖಂಡರು ಸಭೆಯಲ್ಲಿ ಕೋರಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಸ್ಥಳೀಯ ಶಾಸಕ ಎಚ್.ಡಿ.ರೇವಣ್ಣ ಅವರು ಇದಕ್ಕೆ ಪ್ರತಿಕ್ರಿಯಿಸಿ ನಾನು ಸಭೆಗೆ ಬರುವುದನ್ನೇ ಕಾಯುವ ಬದಲು ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸುವಂತೆ ತಾಲೂಕು ದಂಡಾಧಿಕಾರಿಗೆ ಶಾಸಕರು ಸೂಚಿಸಿದರು. ಬಾಬು ಜಗಜೀವನರಾಮ್ ಅವರ ಜನ್ಮದಿನದಂದು ಮೆರವಣಿಗೆ ಅರಕಲಗೂಡು ರಸ್ತೆಯಲ್ಲಿರುವ ಜಗಜೀವನರಾಮ್ ಅವರ ವೃತ್ತದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಬೇಕು. ಅಂಬೇಡ್ಕರ್ ಅವರ ಜಯಂತ್ಯುತ್ಸವದಂದು ಅಂಬೇಡ್ಕರ್ ನಗರದಲ್ಲಿ ಮೆರವಣಿಗೆಯನ್ನು ಪ್ರಾರಂಭಿಸಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸುವಂತೆ ಶಾಸಕರು ಸೂಚಿಸಿದರು.

ಬಾಬು ಜಗಜೀವನರಾಮ್ ಭವನಕ್ಕೆ ಸೂಕ್ತವಾದ ನಿವೇಶನವನ್ನು ಒದಗಿಸಿಕೊಡುವ ವಿಷಯದಲ್ಲಿ ಶಾಸಕರು ಕಾಳಜಿ ವಹಿಸುತ್ತಿಲ್ಲ ಎಂದು ದೂರಿದ ಮಾದಿಗ ದಂಡೋರ ಮುಖಂಡರು ಭವನಕ್ಕೆ ಸೂಕ್ತ ನಿವೇಶನ ಕಲ್ಪಿಸಿ ಕೊಡುವವರೆಗೂ ಯಾವುದೇ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸಭೆಯಲ್ಲಿ ಪ್ರತಿಭಟನೆ ಮಾಡಿ ಸಭೆಯಿಂದ ಹೊರ ನಡೆದರು.

ವಾಕ್ಸಮರ: ಶಾಸಕರ ನಿಲುವನ್ನು ಸಮರ್ಥಿಸಿಕೊಳ್ಳಲು ಮುಂದಾದ ಹಿಂಬಾಲಕರು ಹಾಗೂ ದಲಿತ ಮುಖಂಡರ ನಡುವೆ ಕೆಲ ಸಮಯ ವಾಕ್ ಸಮರ ನಡೆದು ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ಎಸ್‌ಐ ಅಭಿಜಿತ್ ಸಭೆಯಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಇಡೀ ವಿಶ್ವಕ್ಕೆ ಜ್ಞಾನದ ಬೆಳಕನ್ನು ಚೆಲ್ಲಿದ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುವ ಪೂರ್ವಭಾವಿ ಸಭೆಗೆ ಎಲ್ಲ ವರ್ಗದ ಸಂಘ ಸಂಸ್ಥೆಗಳ ಪ್ರಮುಖರನ್ನು ಆಹ್ವಾನಿಸುವಂತೆ ಮುಖಂಡರು ಸಲಹೆ ನೀಡಿದರು.

ಇಬ್ಬರೂ ನಾಯಕರ ಜನ್ಮದಿನಾಚರಣೆಯ ಪ್ರಯುಕ್ತ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಆ ಸಮುದಾಯಗಳ ಮುಖಂಡರನ್ನು ಸನ್ಮಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ವೈ.ಚಂದ್ರಶೇಖರ್, ದಲಿತ ಮುಖಂಡರಾದ ಎಂ.ಸೋಮಶೇಖರ, ಚಿನ್ನಸ್ವಾಮಿ, ಗೋವಿಂದರಾಜು, ತಾ.ಪಂ.ಮಾಜಿ ಅಧ್ಯಕ್ಷರಾದ. ಸಿ.ಆರ್.ಮಂಜುನಾಥ, ಲಕ್ಕೂರು ಬಸವರಾಜ ಹಾಗೂ ಮಂಜುನಾಥ, ಕೃಷ್ಣಮೂರ್ತಿ, ವರ್ಮನ್, ಸತೀಶ್, ಪುರಸಭೆ ಅಧ್ಯಕ್ಷ ಪ್ರಸನ್ನ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ಬಿಇಒ ಸೋಮಲಿಂಗೇಗೌಡ, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net