

ಶಿವಮೊಗ್ಗ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನಿಂದ ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನ ಡಿ.29 ಮತ್ತು 30ರಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ಕಾಲೇಜು ಮೈದಾನದಲ್ಲಿ ಆಯೋಜನೆಗೊಂಡಿದ್ದು, ರಾಜ್ಯ ಮಟ್ಟದ ಎಚ್‌ಎನ್(ಡಾ. ಎಚ್.ನರಸಿಂಹಯ್ಯ) ಪ್ರಶಸ್ತಿಗೆ ಕುವೆಂಪು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಶೈಲ ಸಿ. ಹರಕಂಚಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಬಿ.ಡಿ.ರವಿಕುಮಾರ್ ತಿಳಿಸಿದರು.
ವಿಜ್ಞಾನ, ಖಗೋಳ, ತಂತ್ರಜ್ಞಾನ ಮತ್ತು ವಿಜ್ಞಾನ ವಸ್ತುಪ್ರದರ್ಶನ, ಸಂಸ್ಥೆಯ ವಾರ್ಷಿಕ-2023ರ ಪ್ರಶಸ್ತಿ, ಜೀವಮಾನ ಸಾಧನೆ ಹಾಗೂ ವಿಶಿಷ್ಟ ಸೇವಾ ಪ್ರಶಸ್ತಿಯನ್ನು ಸಮ್ಮೇಳನದಲ್ಲಿ ನೀಡಲಾಗುವುದು. 29ರ ಬೆಳಗ್ಗೆ 10ಕ್ಕೆ ಸಿಎಂ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಖ್ಯಾತ ವಿಜ್ಞಾನಿ ಡಾ. ಎ.ಎಸ್.ಕಿರಣ್‌ಕುಮಾರ್, ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ, ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್, ಶಾಸಕ ಮಾನಪ್ಪ ವಜ್ಜಲ್, ಎಂಎಲ್‌ಸಿ ಶರಣಗೌಡ ಪಾಟೀಲ್, ಮಾಜಿ ಶಾಸಕ ಅಮರೇಗೌಡ ಪಾಟೀಲ್ ಮತ್ತಿತರರು ಉಪಸ್ಥಿತರಿರುವರು ಎಂದರು.
ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಸಾಹಿತಿ ಬಿ.ಟಿ.ಲಲಿತಾ ನಾಯಕ್, ಅಂತಾರಾಷ್ಟ್ರೀಯ ಕೌಶಲ ತರಬೇತುದಾರ ಚೇತನ್‌ರಾಮ್ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕೈ ಪದ್ಮಸಾಲಿ ಅವರಿಗೆ ರಾಜ್ಯಮಟ್ಟದ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು. ವಿವಿಧ ಕ್ಷೇತ್ರಗಳ 10 ಸಾಧಕರಿಗೆ ವಿಶಿಷ್ಟ ಸೇವಾ ಪ್ರಶಸ್ತಿ ನೀಡಿದರೆ, ವಿಜ್ಞಾನ ಗ್ರಾಮಕ್ಕೆ 10 ಎಕರೆ ಜಾಗ ದಾನ ನೀಡಿದ ಆರ್.ರವಿ ಬಿಳಿಶಿವಾಲೆ ಅವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.
ಡಾ. ಕೆಳದಿ ವೆಂಕಟೇಶ್ ಜೋಯಿಸ್, ಸೀಮಾ ಸಿರಾವ್, ಲೋಕೇಶ್, ಬಸವರಾಜ್ ಹಿರೇಮಠ, ಉದಯ ದೇಶಪಾಂಡೆ, ಸಿ.ಮೂರ್ತಿ, ದೇವೇಂದ್ರಪ್ಪ, ಅಮಿತ್, ಜಗದೀಶ್ ಶಿಪ್ರ ಸುದ್ದಿಗೋಷ್ಠಿಯಲ್ಲಿದ್ದರು.
15 ವರ್ಷಗಳಿಂದ ಸಂಶೋಧನೆ
ಮೂರನೇ ವೈಜ್ಞಾನಿಕ ಸಮ್ಮೇಳನದಲ್ಲಿ ರಾಜ್ಯಮಟ್ಟದ ಎಚ್‌ಎನ್ ಪ್ರಶಸ್ತಿಗೆ ಭಾಜನರಾದ ಡಾ. ಶ್ರೀಶೈಲ ಹರಕುಂಚಿ ಅವರು ಕುವೆಂಪು ವಿವಿ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಕಳೆದ 15 ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷ ಔಷಧ ಸಸ್ಯಗಳು, ಜೀವ ವೈವಿಧ್ಯದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುತ್ತಿರುವ ಅವರು ಈಗಾಗಲೇ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಅನೇಕ ಸಂಶೋಧನಾ ಲೇಖನಗಳು ಪ್ರಕಟಗೊಂಡಿದ್ದು ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.