ಎಚ್‌ಎಂಟಿ ಜಮೀನು ಪ್ರಕರಣ, ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್

Show cause notice
Published on

ಬೆಂಗಳೂರು: ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿ, ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಡಿನೋಟಿಫಿಕೇಷನ್‌ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಮೂವರು ಐ.ಎಫ್.ಎಸ್. ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ನಿಯಮ ಉಲ್ಲಂಘನೆ ಮತ್ತು ಕರ್ತವ್ಯಲೋಪ ಎಸಗಿ, ಅರಣ್ಯ, ಪರಿಸರಕ್ಕೆ ಘೋರ ಅನ್ಯಾಯ ಎಸಗಲು ಕಾರಣರಾಗಿದೆ. ನೋಟಿಸ್ ತಲುಪಿದ ಒಂದು ವಾರದೊಳಗೆ ಸಮಜಾಯಿಷಿ ನೀಡಲು, ತಪ್ಪಿದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ಎಚ್‌ಎಂಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್ ಸರ್ವೆ ನಂ.1 ಮತ್ತು 2ರ ಜಮೀನು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಕೇವಲ ಅಧಿಕಾರಿಗಳ ಮಟ್ಟದಲ್ಲೇ ನಿರ್ಧಾರ ಕೈಗೊಂಡು, ಸುಪ್ರೀಂಕೋರ್ಟ್‌ಗೆ ಈ ಅಧಿಕಾರಿಗಳು ಐ.ಎ. ಸಲ್ಲಿಸಿದ್ದರು.

ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಅಂದಿನ ಅರಣ್ಯ ಸಚಿವರ ಅಥವಾ ಸಚಿವ ಸಂಪುಟದ ಪೂರ್ವಾನುಮತಿಯನ್ನೂ ಪಡೆದಿರಲಿಲ್ಲ. ನಿಯಮ ಉಲ್ಲಂಘಿಸಿ ಸಾವಿರಾರು ಕೋಟಿ ರೂ. ಬೆಲೆ ಬಾಳುವ ಭೂಮಿಯನ್ನು ಡಿ ನೋಟಿಫೈ ಮಾಡಲು ಐಎ ಸಲ್ಲಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದರು.

ನೋಟಿಸ್‌ನಲ್ಲಿ ಇರುವುದೇನು ?

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾಗಿ ನಿವೃತ್ತರಾಗಿರುವ ಸಂದೀಪ್ ದವೆ, ನಿವೃತ್ತ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಗೋಗಿ ಹಾಗೂ ಹಾಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿರುವ ಐಟಿಸಿ ವಿಭಾಗದ ಸ್ಮಿತಾ ಬಿಜ್ಜೂರ್, ತಾಂತ್ರಿಕ ಕೋಶದ ಆರ್. ಗೋಕುಲ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ಅನ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಆಗದ ಹೊರತು ಒಮ್ಮೆ ಅರಣ್ಯ ಎಂದು ನಮೂದಾದ ಭೂಮಿ ಎಂದೆಂದಿಗೂ ಅರಣ್ಯವೇ ಆಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಅರಣ್ಯ ಸಂರಕ್ಷಣಾ ಕಾಯಿದೆ 1980ರಡಿ ಅರಣ್ಯ ಭೂಮಿಯನ್ನು ಅರಣ್ಯೇತರ ಬಳಕೆಗೆ ಪರಿಹಾರ ಭೂಮಿ ಒದಗಿಸುವುದರೊಂದಿಗೆ ಎನ್.ಪಿ.ವಿ.ಮೊತ್ತ ಪಾವತಿಸಿ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ.

ನಿಯಮಾವಳಿ ಉಲ್ಲಂಘನೆ

ಹೀಗೆ ಅನುಮತಿ ನೀಡಿದರೂ ಸಹ ಅರಣ್ಯ ಭೂಮಿಯನ್ನು ಗುತ್ತಿಗೆ ಮಾತ್ರ ನೀಡಿ, ಗುತ್ತಿಗೆ ಅವಧಿ ಮುಗಿದ ಬಳಿಕ ಅರಣ್ಯ ಇಲಾಖೆಗೆ ಮರಳಿ ಪಡೆಯಬೇಕಾಗುತ್ತದೆ. ಆದರೆ ಎಚ್.ಎಂ.ಟಿ. ತನ್ನ ವಶದಲ್ಲಿರುವ ಅರಣ್ಯ ಭೂಮಿಯನ್ನು ವಿವಿಧ ಸರ್ಕಾರಿ, ಖಾಸಗಿ ಸಂಸ್ಥೆ, ವ್ಯಕ್ತಿಗಳಿಗೆ ಭಾಗಶಃ ಮಾರಾಟ ಮಾಡಿದೆ.

ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಕಾಯ್ದೆ, ನಿಯಮಾವಳಿ ಉಲ್ಲಂಸಿದ್ದು, ಮಿಗಿಲಾಗಿ ಪರಿಸರ ಹಾನಿ ತೀವ್ರ ಸ್ವರೂಪದ್ದಾಗಿರುತ್ತದೆ. ಅರಣ್ಯ ಮರುಸ್ಥಾಪನೆಗೆ ಅಡ್ಡಿಯುಂಟಾಗಿರುತ್ತದೆ ಎಂದೂ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net