HMPV ವೈರಸ್ ಅಪಾಯಕಾರಿಯಲ್ಲವಾದರೂ ಅಗತ್ಯ ಮುನ್ನೆಚ್ಚರಿಕೆ ಕ್ರಮ: ಸಿಎಂ ಸಿದ್ದರಾಮಯ್ಯ ಮಾಹಿತಿ

dk - 2025-01-06T133316.618
Published on

 ಬೆಂಗಳೂರು: ಚೀನಾದಲ್ಲಿ HMPV ವೈರಸ್ ಹಾವಳಿ ಹೆಚ್ಚಾಗಿರುವ ಬೆನ್ನಲ್ಲೆ ರಾಜ್ಯದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಎಂಟು ತಿಂಗಳ ಮಗುವಿನಲ್ಲಿ ಶಂಕಿತ ಎಚ್​ಎಂಪಿವಿ ವೈರಸ್ ಲಕ್ಷಣಗಳು ಕಂಡುಬಂದಿವೆ. ಈ ವೈರಾಣು ಅಪಾಯಕಾರಿಯಲ್ಲವಾದರೂ ಅಗತ್ಯ ಮುನ್ನಚ್ಚರಿಕೆ ಕ್ರಮವಹಿಸಲು ಸೂಚಿಸಿರುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಯಾವುದೇ ಪ್ರಯಾಣದ ಹಿನ್ನೆಲೆಯಿರದ ಮಗುವಿಗೆ ತಪಾಸಣೆಗೆ ಒಳಪಡಿಸಿದಾಗ ಪಾಸಿಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತಂತ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಅಗತ್ಯ ಕ್ರಮವಹಿಸಲು ರಾಜ್ಯ ಸರ್ಕಾರ ಸಹಕರಿಸಲಿದೆ ಎಂದು ಹೇಳಿದರು.

 ಶರಣಾಗತಿಗೆ ಸೂಚನೆ

 ನಕ್ಸಲೀಯರು ಶಸ್ತ್ರಸಹಿತ ಹೋರಾಟ ತ್ಯಜಿಸಿ ಸಮಾಜದ ಮುಖ್ಯ ವಾಹಿನಿಗೆ ಸೇರುವಂತೆ ಸಲಹೆ ನೀಡಿರುವೆ. ಸ್ವ ಇಚ್ಛೆಯಿಂದ ಶರಣಾಗಲು ಮುಂದೆ ಬಂದವರಿಗೆ ಕಾನೂನು ಪ್ರಕಾರ ಸವಲತ್ತು ಒದಗಿಸಲಾಗುವುದು. ಶರಣಾಗತಿ ವಿಚಾರದಲ್ಲಿ ಇದುವರೆಗೆ ಯಾರೊಬ್ಬರೂ ಸರ್ಕಾರದ ಸಂಪರ್ಕಕ್ಕೆ ಬಂದಿಲ್ಲವೆಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

 ದಾಖಲೆಗಳು ನೀಡಲಿ

 ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು 60 ಕಮಿಷನ್ ಆರೋಪದ ನಿಮಗೆ ( ಪತ್ರಕರ್ತರು) ಏನಾದರೂ ದಾಖಲೆಗಳನ್ನು ತೋರಿಸಿದರಾ? ಅಥವಾ ಕೊಟ್ಟಿದ್ದಾರಾ? ದಾಖಲೆಗಳಿದ್ದರೆ ನೀಡಲಿ ಅಗತ್ಯ ಕ್ರಮವಹಿಸುತ್ತೇವೆ ಎಂದು ಹೇಳಿದರು.

 ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ನಾವು ಮಾಡಿದ್ದಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈ ಕುರಿತು ನೇರವಾಗಿ ಪ್ರಧಾನಿಗೆ ಪತ್ರ ಬರೆದಿದ್ದರು. ಅದೇ ಆಧಾರದಲ್ಲಿ ನಾವು 40ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದೆವು ಎಂದು ಸಿಎಂ‌ ಸಿದ್ದರಾಮಯ್ಯ ಸಮಜಾಯಿಷಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net