

ಶಿವಮೊಗ್ಗ: ಆರ್‌ಎಚ್‌ಎಂ(ರಾಷ್ಟ್ರೀಯ ಆರೋಗ್ಯ ಮಿಷನ್) ಯೋಜನೆ ಅಡಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ರಾಜ್ಯ ಸರ್ಕಾರ ವೇತನ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಕಾಯಂಗೊಳಿಸುವುದು ಸೇರಿ ಮತ್ತಷ್ಟ ಬೇಡಿಕೆಗಳಿದ್ದು ಅವುಗಳನ್ನೂ ಸರ್ಕಾರ ಈಡೇರಿಸಬೇಕಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಗ್ರಹಿಸಿದರು.
ಸಮುದಾಯದ ಆರೋಗ್ಯ ಅಧಿಕಾರಿಗಳು ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಹೆಚ್ಚಿಸಬೇಕು. ಬೇರೆ ಬೇರೆ ಜಿಲ್ಲೆಗಳಲ್ಲಿ ಅನಿವಾರ್ಯವಾಗಿ ಕೆಲಸ ಮಾಡುತ್ತಿರುವವರಿಗೆ ಒಮ್ಮೆ ಮಾತೃ ಜಿಲ್ಲೆಗೆ ವರ್ಗಾವಣೆಗೆ ಅವಕಾಶ ನೀಡಬೇಕು. ಆರೋಗ್ಯ ಇಲಾಖೆ ಸಿಬ್ಬಂದಿಗಳಾದ್ದರೂ ಅವರಿಗೆ ಆರೋಗ್ಯ ವಿಮೆ, ಜೀವ ವಿಮೆ ಇಲ್ಲ. ಎರಡನ್ನೂ ಕೊಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಎನ್‌ಎಚ್‌ಎಂ ಯೋಜನೆ ವ್ಯಾಪ್ತಿಯ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು. ಅಪ್ರತ್ಯಕ್ಷ ಭದ್ರತೆ ನೀಡಲಾಗಿದ್ದು ಭದ್ರತೆ ಆದೇಶ ಕೊಡಬೇಕು. ಯೋಜನೆ ವ್ಯಾಪ್ತಿಯ ಸಿಬ್ಬಂದಿಗೆ ಸೌಲಭ್ಯ ಮತ್ತು ವೇತನ ನೀಡುವ ಸಲುವಾಗಿ ರಚನೆಯಾಗಿದ್ದ ಶ್ರೀನಿವಾಸ ಆಚಾರಿ ಆಯೋಗವು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಕೆಲ ಅಂಶಗಳನ್ನು ಶಿಫಾರಸು ಮಾಡಿತ್ತು. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಕೆಲ ಅಂಶಗಳಿಗೆ ಮಾತ್ರ ಪುರಸ್ಕರಿಸಿ ವೇತನ ಹೆಚ್ಚಳ ಮಾಡಿರಲಿಲ್ಲ. ಇದೀಗ ಸಿದ್ದರಾಮಯ್ಯ ಸರ್ಕಾರ ಸಿಬ್ಬಂದಿ ವೇತನ ಹೆಚ್ಚಳ ಮಾಡಿದೆ ಎಂದರು.
ಎನ್‌ಎಚ್‌ಎಂ ಸಿಬ್ಬಂದಿಗಳ ಪ್ರಮುಖ ಬೇಡಿಕೆಯಾಗಿದ್ದ ವೇತನ ಏರಿಕೆ ಮಾಡಿದ್ದು ಇದರಿಂದ 57 ಕೋಟಿ ರೂ. ಹೊರೆ ಆಗಲಿದೆ. ಈ ಯೋಜನೆಯಲ್ಲಿ 150 ವಿವಿಧ ವರ್ಗದ ಸಿಬ್ಬಂದಿಗಳಿದ್ದು ತಜ್ಞ ವೈದ್ಯರಿಗೆ ಮಾತ್ರ ವೇತನ ಹೆಚ್ಚಿತ್ತು. ಇದೀಗ ಶೇ.15ರಷ್ಟು ಏರಿಕೆ ಮಾಡಿದ್ದಾರೆ. 10 ತಿಂಗಳ ಏರಿಕೆ ಬಾಕಿ ಕೊಡಲು ಆದೇಶ ಆಗಿದೆ. ಹಣ ಬಿಡುಗಡೆ ಆಗಿದೆ. 20 ಸಾವಿರ ರೂ. ವೇತನ ಪಡೆಯುತ್ತಿದ್ದ ಆಯುಷ್ ವೈದ್ಯರಿಗೆ ಕೂಡ ವೇತನ ಹೆಚ್ಚಳ ಆಗಿದೆ. ಒಂಬತ್ತು ಸಾವಿರ ಸಿಬ್ಬಂದಿ, ಎರಡು ಸಾವಿರ ಆಯುಷ್ ವೈದ್ಯರು ಸೇರಿ ಹದಿನೇಳು ಸಾವಿರ ಜನರಿಗೆ ಇದರಿಂದ ಸೌಲಭ್ಯ ಸಿಗುತ್ತಿದೆ ಎಂದರು.
ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಪ್ರಮುಖರಾದ ಧೀರರಾಜ್ ಹೊನ್ನವಿಲೆ, ಹಿರಣ್ಣಯ್ಯ, ಐಡಿಯಲ್ ಗೋಪಿ, ಶಿ.ಜು.ಪಾಷಾ, ಪದ್ಮನಾಭ ಸುದ್ದಿಗೋಷ್ಠಿಯಲ್ಲಿದ್ದರು.