

ಬೆಂಗಳೂರು: ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್(HK Patil) ಅವರು ಶುಕ್ರವಾರ ಜಿಎಸ್ಟಿ(GST) ಕಾನೂನು ವಿಚಾರವಾಗಿ ಸಭೆ ನಡೆಸಿದ್ದು, ಬಿಜೆಪಿ ನಾಯಕರು ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
"ಜಿಎಸ್ಟಿ ವಿಚಾರವಾಗಿ ನಮ್ಮ ಇಲಾಖೆ ಆತಂಕ ವ್ಯಕ್ತಪಡಿಸಿದೆ. ತಪ್ಪು ಮಾಡಿದವರಿಗೆ ಕಾನೂನು ಸಡಿಲಿಕೆ ಸಲ್ಲದು. ಈಗಾಗಲೇ ನಾವು ಮೂರು ಸಲಹೆಗಳನ್ನು ಕೊಟ್ಟಿದ್ದೇವೆ. ಜಿಎಸ್ಟಿ ಕಾನೂನು ಪುನರ್ ಪರಿಶೀಲನೆಗೆ ಸೂಚಿಸಿದ್ದೇವೆ" ಎಂದು ಹೇಳಿದರು. ಈ ಮಧ್ಯೆ ಮತಾಂತರ ನಿಷೇಧ ಕಾಯ್ದೆ ರದ್ದು ಸೇರಿದಂತೆ ಬಿಜೆಪಿ ಮಾಡಿರುವ ಸರಣಿ ಆರೋಪಗಳನ್ನು ಎಚ್.ಕೆ. ಪಾಟೀಲ್ ಅವರು ತಳ್ಳಿಹಾಕಿದ್ದಾರೆ.
"ಬಡವರ ಕಲ್ಯಾಣ ಮಾಡಿದ್ರೆ ಸರ್ಕಾರ ದಿವಾಳಿಯಾಗುತ್ತದೆ. ನಮ್ಮಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಆಗುತ್ತಿಲ್ಲ ಎಂಬುದು ಅಪಪ್ರಚಾರ! ಬಿಜೆಪಿ ಜನರ ಸಮಯವನ್ನು ಹಾಳು ಮಾಡುತ್ತಿದೆ. ಅಜೆಂಡಾ ಹಾಗೂ ಹಿಡನ್ ಅಜೆಂಡಾ ಎರಡೂ ಬಿಜೆಪಿಯವರಲ್ಲಿ ಇದೆ. ನಮ್ಮದು ಅವರಂತಲ್ಲ, ಬರೀ ಅಜೆಂಡಾ ಮಾತ್ರವೇ ಇರಲಿದೆ. ನಾವು ಜನರಿಗೆ ಗ್ಯಾರಂಟಿ ಘೋಷಿಸಿದ್ದೆವು, ಅದನ್ನು ಜಾರಿಗೆ ತರುತ್ತಿದ್ದೇವೆ ಅಷ್ಟೇ!" ಎಂದು ಹೇಳುವ ಮುಖೇನ ಬಿಜೆಪಿ(BJP) ನಾಯಕರ ಹೇಳಿಕೆಗಳಿಗೆ ಎಚ್.ಕೆ. ಪಾಟೀಲ್ ತಿರುಗೇಟು ನೀಡಿದ್ದಾರೆ.