ಯುವ ಸಮುದಾಯದಲ್ಲೇ ಎಚ್​ಐವಿ ಸೋಂಕು ಹೆಚ್ಚು!; 7967 ಹೊಸ ಪ್ರಕರಣ ಪತ್ತೆ

Dr Girish And Lakshminarayan
Published on

ನಡವಳಿಕೆ ಹಾಗೂ ನಿರ್ಲಕ್ಷ್ಯದಿಂದ ಉಂಟಾಗುವ ಎಚ್​ಐವಿ/ಏಡ್ಸ್ ಪ್ರಕರಣಗಳನ್ನು 2030ರ ವೇಳೆಗೆ ಶೂನ್ಯಕ್ಕೆ ತರುವ ಗುರಿಯೊಂದಿಗೆ ‘ನ್ಯಾಕೋ’ ಸಹಯೋಗದಲ್ಲಿ ರಾಜ್ಯ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ. ಇದರಿಂದ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆಯಾದರೂ, ಯುವಜನರಲ್ಲಿ ವರದಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ‘ವಿಶ್ವ ಏಡ್ಸ್ ದಿನ’ದ ಅಂಗವಾಗಿ ‘ವಿಜಯವಾಣಿ’ ಆಯೋಜಿಸಿದ್ದ ಸಂವಾದದಲ್ಲಿ ಇಎಸ್​ಐ ಆಸ್ಪತ್ರೆಯ ಚರ್ಮರೋಗ ತಜ್ಞ ಹಾಗೂ ಏಡ್ಸ್ ಜಾಗೃತಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ಗಿರೀಶ್ ಹಾಗೂ ಇಎಸ್​ಐ ಆಸ್ಪತ್ರೆಯ ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕ ಲಕ್ಷ್ಮೀನಾರಾಯಣ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು: ಪ್ರಸಕ್ತ ಸಾಲಿಗೆ (2024-25) 23,92,310 ಮಂದಿ, 12,05,060 ಗರ್ಭಿಣಿಯರನ್ನು ಪರೀಕ್ಷಿಸುವ ಗುರಿ ಹೊಂದಲಾಗಿತ್ತು. ಈವರೆಗೂ 23,15,909 ಮಂದಿ, 7,11,510 ಗರ್ಭಿಣಿಯರಿಗೆ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಕ್ರಮವಾಗಿ 7,720 ಹಾಗೂ 247 ಹೊಸ ಸೋಂಕು ಪ್ರಕರಣ ವರದಿಯಾಗಿವೆ. ಸೋಂಕಿತರಲ್ಲಿ ಯುವಸಮೂಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಚ್​ಐವಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಮಾತ್ರವಲ್ಲದೆ, ಮಾದಕ ದ್ರವ್ಯ (ಡ್ರಗ್) ಬಳಕೆ (ಒಂದು ಸಿರೆಂಜ್ ಹಲವರು ಬಳಸುವುದು), ರಕ್ತ ವರ್ಗಾವಣೆ, ಅಸುರಕ್ಷಿತ ವೈದ್ಯಕೀಯ ಪರಿಕರಗಳ ಬಳಕೆ, ಸಲೂನ್​ಗಳಲ್ಲಿ ಒಂದೇ ರೇಜರ್ ಹಲವರಿಗೆ ಬಳಕೆ ಸೇರಿ ಹಲವು ಕಾರಣಗಳಿಂದ ಉಂಟಾಗುತ್ತದೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಎಚ್ಚರಿಕೆ ವಹಿಸುವ ಅಗತ್ಯವಿದೆ.

ಬೆಂಗಳೂರಿನಲ್ಲಿ ಹೆಚ್ಚು: ಹಿಂದೆಲ್ಲಾ ಗಡಿ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. ಇದೀಗ ವಲಸಿಗರ ಸಂಖ್ಯೆ ಹೆಚ್ಚಳದಿಂದಾಗಿ ಬೆಂಗಳೂರಿನಲ್ಲೂ ಪ್ರಕರಣಗಳು ಹೆಚ್ಚುತ್ತಿವೆ. ವಲಸಿಗರು ಸೇರಿ ನೋಂದಾಯಿತ ಸಮುದಾಯಗಳಿಗೆ ತಿಳಿವಳಿಕೆ ಜತೆಗೆ ನಿಯಮಿತವಾಗಿ 3 ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆ, 6 ತಿಂಗಳಿಗೊಮ್ಮೆ ಎಚ್​ಐವಿ ಸೋಂಕು ಪರೀಕ್ಷೆ, ಉಚಿತ ಕಾಂಡಂ ವಿತರಣೆ ಹಾಗೂ ಸೋಂಕು ಪತ್ತೆಯಾದಲ್ಲಿ ಎಆರ್​ಟಿ ಚಿಕಿತ್ಸಾ ಕೇಂದ್ರಗಳಲ್ಲಿ ಉಚಿತ ಔಷಧ ವಿತರಣೆ ಹಾಗೂ ಕೌನ್ಸಿಲ್​ನಂತಹ ಕಾರ್ಯಕ್ರಮಗಳು ಜಾರಿಯಲ್ಲಿವೆ.

ಶೀಘ್ರ ಪತ್ತೆ ದೀರ್ಘ ಜೀವನ: ಏಡ್ಸ್ ಈಗ ಮಾರಣಾಂತಿಕವಲ್ಲ, ಆದರೆ ನಿಯಮಿತ ತಪಾಸಣೆ ಹಾಗೂ ಚಿಕಿತ್ಸೆಯ ಮೂಲಕ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಸೋಂಕು ಸಂಬಂಧಿತ ಅನುಮಾನಗಳಿದ್ದರೆ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಆರಂಭದಲ್ಲೇ ದೃಢಪಟ್ಟು ಚಿಕಿತ್ಸೆ, ಉತ್ತಮ ಆಹಾರ ಕ್ರಮ ಹಾಗೂ ಜೀವನ ಶೈಲಿಯಿಂದ ದೀರ್ಘಕಾಲ ಬದುಕಬಹುದಾಗಿದೆ. ಆದರೆ ಸೋಂಕಿತರಲ್ಲಿ ಬಹಳಷ್ಟು ಮಂದಿ ಚಿಕಿತ್ಸೆ, ಔಷಧ ನಿರಾಕರಿಸುತ್ತಾರೆ. ಜೀವನ ಪರ್ಯಂತ ಔಷಧ ಸೇವಿಸಲು ಸಾಧ್ಯವಿಲ್ಲ ಎಂದು ಕೆಲವರು ಆಯುರ್ವೆದ, ಯುನಾನಿ ಸೇರಿ ಪರ್ಯಾಯ ಚಿಕಿತ್ಸಾ ಪದ್ಧತಿ ಮೊರೆ ಹೋಗು ತ್ತಿದ್ದಾರೆ. ಇದರಿಂದಾಗಿ ಔಷಧ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ. ಅಂತಹವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ನಿಯಮಿತ ಔಷಧ ಸೇವಿಸುತ್ತಿರುವ ಬಹುತೇಕರಲ್ಲಿ ಪರೀಕ್ಷೆ ಮಾಡಿದಾಗ ನೆಗೆಟಿವ್ ಬಂದಿರುವುದೂ ಉಂಟು.

ಜಾಗೃತಿ ಅಗತ್ಯ: ಸೋಂಕಿನ ಜಾಗೃತಿ ಮೂಡಿಸಲು ನ್ಯಾಕೋ ಸಹಯೋಗದಲ್ಲಿ ಆರೋಗ್ಯ ಇಲಾಖೆ ಜನಪದ ಕಲಾತಂಡಗಳ ಮೂಲಕ ಬೀದಿ ನಾಟಕಗಳು, ಶಾಲಾ-ಕಾಲೇಜುಗಳಲ್ಲಿ ಅರಿವು ಸೇರಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಎಚ್​ಐವಿಮುಕ್ತ ಗ್ರಾಪಂ ಕಾರ್ಯಕ್ರಮದ ಅಡಿಯಲ್ಲಿ ಮನೆಮನೆಗೆ ಮಾಹಿತಿ ನೀಡುವ ಆಂದೋಲನ ಕೈಗೊಳ್ಳಲಾಗುತ್ತಿದೆ. ಇದಲ್ಲದೆ, ಶಸ್ತ್ರಚಿಕಿತ್ಸೆಗೆ ಒಳಪಡುವವರಿಗೆ, ಗರ್ಭಿಣಿ ಮತ್ತು ಆಕೆಯ ಪತಿಗೆ ಎಚ್​ಐವಿ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಆದರೆ ಯುವಜನರಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ.

ಈ ವರ್ಷದ ಘೋಷವಾಕ್ಯ: ‘ಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನುಸರಿಸೋಣ’ ನನ್ನ ಆರೋಗ್ಯ-ನನ್ನ ಹಕ್ಕು ('Take The Right Path' My Health-My Right)

ಸೋಂಕಿತರ ನಡುವೆ ವಿವಾಹ: ಎಚ್​ಐವಿ ಸೋಂಕಿತ ಯುವಜನರು ವಿವಾಹ ಆಗುವುದು ಕಷ್ಟ. ಬಹಳಷ್ಟು ಮಂದಿ ವಿಷಯ ಮುಚ್ಚಿಟ್ಟು ವಿವಾಹವಾಗಿ ಇತರರ ಜೀವನ ಹಾಳುಗೆಡವುತ್ತಾರೆ. ಇಂತಹ ಪ್ರಕರಣಗಳನ್ನು ತಪ್ಪಿಸಲು ಸೋಂಕಿತರಿಗೂ ವೈವಾಹಿಕ ಜೀವನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅಂದರೆ ಸೋಂಕಿತ ಯುವಕ ಸೋಂಕಿತ ಯುವತಿಯೊಂದಿಗೆ ವಿವಾಹ ಮಾಡಿಕೊಳ್ಳುವುದು. ಈ ಮಾಹಿತಿ ಗೌಪ್ಯವಾಗಿರುತ್ತದೆ. ಈಗಾಗಲೇ ಬಹಳಷ್ಟು ಮಂದಿ ವಿವಾಹವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ವಿದ್ಯಾವಂತ ಯುವಜನರು ವಿವಾಹಕ್ಕೂ ಮುನ್ನ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ.

ಸೌಲಭ್ಯ ವಿತರಣೆ: ಸೋಂಕಿತರಿಗೆ ಆರೋಗ್ಯ ಇಲಾಖೆಯಿಂದ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಆಹಾರ ಇಲಾಖೆಯು ಅಂತ್ಯೋದಯ ಯೋಜನೆಯಡಿ 30 ಕೆ.ಜಿ. ಆಹಾರಧಾನ್ಯ ವಿತರಿಸುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಧನಶ್ರೀ ಯೋಜನೆಯಡಿ 25 ಸಾವಿರ ರೂ. ಹಾಗೂ ಬಾಧಿತ ಮಕ್ಕಳಿಗೆ ಮಾಸಿಕ ಒಂದು ಸಾವಿರ ಆರ್ಥಿಕ ನೆರವು ನೀಡಲಾಗುತ್ತಿದೆ. ಮಕ್ಕಳಿಗೆ ಆರ್​ಟಿಇ ಅಡಿ ಉಚಿತ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ಸೌಲಭ್ಯಗಳೂ ಲಭ್ಯವಿದೆ. ಇದಲ್ಲದೆ ಕಳಂಕಿತ ತಾರತಮ್ಯ ಹಾಗೂ ದೌರ್ಜನ್ಯಕ್ಕೆ ಒಳಗಾದ ಸೋಂಕಿತರಿಗೆ ಕಾನೂನು ಸೇವೆ ಸೇರಿ ಸರ್ಕಾರದಿಂದ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

9ನೇ ಸ್ಥಾನದಲ್ಲಿ ಕರ್ನಾಟಕ: ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ (ಎನ್​ಎಸಿಪಿ-5) 5ರ ಪ್ರಕಾರ ಭಾರತದ ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರ, ಮಣಿಪುರ ಮತ್ತು ಮೇಗಾಲಯ ರಾಜ್ಯಗಳು ಹೆಚ್ಚು ಎಚ್​ಐವಿ/ಏಡ್ಸ್ ಹರಡಿರುವ ರಾಜ್ಯಗಳಾಗಿವೆ. ಕರ್ನಾಟಕ 9ನೇ ಸ್ಥಾನದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net