

ರಾಮನಗರ: ಜಿಲ್ಲೆಯ ಜನತೆಯ ಅಪೇಕ್ಷೆಯಂತೆ ಸುಸಜ್ಜಿತ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. ನಗರ ಪ್ರದೇಶ ಮತ್ತು ಕಸಬಾ ಹೋಬಳಿಯಲ್ಲಿ ಕೈಗೊಳ್ಳಲಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರೈತರು, ರೀಲರ್‌ಗಳಿಗೆ ಒಂದೇ ಸ್ಥಳದಲ್ಲಿ ಮೂಲಸೌಕರ್ಯ ಒಳಗೊಂಡಂತೆ ಸುಸಜ್ಜಿತ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಉದ್ದೇಶವಾಗಿದೆ. ಆದರೆ, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಬ್ಬರಿಗೂ ಅನುಕೂಲವಾಗುವಂತೆ ಎಚ್‌ಡಿಕೆ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ತಂದು ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಅದರಂತೆ ಕೃಷಿ ಉತ್ಪನ್ನ ಮಾರುಕಟ್ಟೆಗೆ 4.5 ಕೋಟಿ ರೂ. ಅನುದಾನ ಮಂಜೂರಾಗಿದೆ. ಇದರಲ್ಲಿ ಎಪಿಎಂಸಿಗೆ ಕಮಾನು, ವಿಶ್ರಾಂತಿ ತಾಣ, ಕ್ಯಾಂಟಿನ್ ಸೇರಿದಂತೆ ವಿವಿಧ ಅಭಿವೃದ್ದಿ ಕೆಲಸಗಳು, 25ನೇ ವಾರ್ಡಿನಲ್ಲಿ 4 ಲಕ್ಷ ರೂ. ವೆಚ್ಚದ ಕೋಡಿಪುರ ಸಂಪರ್ಕ ರಸ್ತೆ ಅಭಿವೃದ್ದಿ, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 76 ಲಕ್ಷ ರೂ. ವೆಚ್ಚದಲ್ಲಿ 6 ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಇಂದು ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
31ನೇ ವಾರ್ಡಿನ ರಂಗರಾಯನದೊಡ್ಡಿಗೆ ಹೋಗುವ ರಸ್ತೆ ಹದಗೆಟ್ಟಿದ್ದು, ಈ ಬಗ್ಗೆ ನಾಗರಿಕರು ಗಮನ ಸೆಳೆದಿದ್ದಾರೆ. ಸ್ಥಳ ಪರಿಶೀಲಿಸಿ ರಸ್ತೆ ಅಭಿವೃದ್ಧಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಂಪನಹಳ್ಳಿ, ಕೆಂಜಿಗರಹಳ್ಳಿ ಬಯಲು, ತುಂಬೇನಹಳ್ಳಿ, ಕಾಡನಕುಪ್ಪೆ ಸೇರಿದಂತೆ ಅರಣ್ಯ ಪ್ರದೇಶ ಅಂಚಿನಲ್ಲಿರುವ ಗ್ರಾಮಗಳ ಜನ ಆನೆ ದಾಳಿಯಿಂದ ಭಯಭೀತರಾಗಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ಡಿಎ್ಒ ಅವರಿಗೆ ತಿಳಿಸಿದ್ದೇನೆ ಎಂದರು.
ಎಪಿಎಂಸಿ ಉಪಾಧ್ಯಕ್ಷ ವೆಂಕಟರಂಗಯ್ಯ, ಮಾಜಿ ಅಧ್ಯಕ್ಷರಾದ ದೊರೆಸ್ವಾಮಿ, ಪುಟ್ಟರಾಮಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಜೆಡಿಎಸ್ ರಾಜ್ಯ ವಕ್ತಾರ ಬಿ.ಉಮೇಶ್, ನಗರ ಘಟಕದ ಅಧ್ಯಕ್ಷ ಗೂಳಿಗೌಡ (ಕುಮಾರ್), ಗ್ರಾಮಾಂತರ ಘಟಕದ ಅಧ್ಯಕ್ಷ ಅಜಯ್, ಜೆಡಿಎಸ್ ಮುಖಂಡರಾದ ಹೋಟೆಲ್ ಉಮೇಶ್, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಎಪಿಎಂಸಿ ಕಾರ್ಯದರ್ಶಿ ರಂಜುಮೌಳಿ ಮತ್ತಿತರರು ಇದ್ದರು.
ರಸ್ತೆ ಅಭಿವೃದ್ಧಿಗೆ ಮನವಿ : ಈ ವೇಳೆ ಕಾಲೇಜು ವಿದ್ಯಾರ್ಥಿಗಳು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಿಕೊಡ ಬೇಕು ಮತ್ತು ಕಾಲೇಜು ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಅನಿತಾ ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು.
ದಾಖಲೆ ನಾಶ
ರಾಮನಗರ: ರೇಷ್ಮೆಗೂಡು ಮಾರುಕಟ್ಟೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಸ್ಪಷ್ಟ ಚಿತ್ರಣ ಸೋಮವಾರವೂ ದೊರೆತಿಲ್ಲ. ಗೂಡು ಮಾರಾಟ ಮಾಡಿದ ರೈತರಿಗೆ ಹಣ ಸಂದಾಯ ಮಾಡದೆ ಕೋಟ್ಯಂತರ ರೂ.ವಂಚಿಸಲಾಗಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸೋಮವಾರವೂ ರೇಷ್ಮೆ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಲೆಕ್ಕ ಪರಿಶೋಧಕರ ತಂಡ ದಾಖಲೆಗಳನ್ನು ಪರಿಶೀಲಿಸಿದೆ. ಆದರೆ ಮಾರುಕಟ್ಟೆಯ ಆನ್‌ಲೈನ್ ವ್ಯವಹಾರಕ್ಕೆ ಬಳಕೆ ಮಾಡುತ್ತಿದ್ದ ಕಂಪ್ಯೂಟರ್‌ನಲ್ಲಿ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಲಾಗಿದ್ದು, ಹಾರ್ಡ್ ಡಿಸ್ಕ್ ಮೂಲಕ ಇವುಗಳನ್ನು ಮರಳಿ ಪಡೆಯುವ ಯತ್ನ ನಡೆದಿದೆ. ಅಲ್ಲದೆ, ಕೆಲವು ಕಡತಗಳು ನಾಪತ್ತೆಯಾಗಿರುವುದು ಅಧಿಕಾರಿಗಳ ತಲೆಬಿಸಿ ಹೆಚ್ಚಿಸಿದೆ.
60 ಲಕ್ಷ ಹಂಚಿಕೆಗೆ ನಿರ್ಧಾರ : ಮಾರುಕಟ್ಟೆ ಖಾತೆಯಲ್ಲಿರುವ 60 ಲಕ್ಷ ರೂ.ಗಳನ್ನು 140 ರೈತರಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಬಹುತೇಕ ಮಂಗಳವಾರ ಸಂಜೆ ವೇಳೆಗೆ ರೈತರ ಖಾತೆಗೆ ಹಣ ಸಂದಾಯವಾಗಲಿದೆ ಎಂದು ಮಾರುಕಟ್ಟೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಈ ಸಂಬಂಧ ತನಿಖೆ ನಡೆಸುವಂತೆ ಕೋರಿ ಪೊಲೀಸರಿಗೆ ದೂರು ನೀಡುವ ಸಾಧ್ಯತೆ ಇದೆ. ಈಗಾಗಲೇ ನಾಪತ್ತೆ ಆಗಿರುವ ಮಾರುಕಟ್ಟೆ ಡಿಡಿ ಹುಡುಕಾಟ ತೀವ್ರಗೊಂಡಿದ್ದು ಸೋಮವಾರವೂ ಪತ್ತೆಯಾಗಿಲ್ಲ.