

| ಹರೀಶ್ ಬೇಲೂರು, ಸಕಲೇಶಪುರ
ಬರಪೀಡಿತ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಐತಿಹಾಸಿಕ ಎತ್ತಿನಹೊಳೆ ಯೋಜನೆಯ ಮೊದಲನೇ ಹಂತ ಕೊನೆಗೂ ಉದ್ಘಾಟನೆಗೆ ಸಿದ್ಧಗೊಂಡಿದೆ. ಶುಕ್ರವಾರ (ಸೆ.6) ಮಧ್ಯಾಹ್ನ 12.05ಕ್ಕೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಎಚ್.ಕೆ. ಪಾಟೀಲ್, ಬೋಸರಾಜು ಇತರರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಶಾಸಕರಾದ ಶಿವಲಿಂಗೇಗೌಡ, ಸಿಮೆಂಟ್ ಮಂಜು, ಸಂಸದ ಶ್ರೇಯಸ್ ಪಟೇಲ್ ಸೇರಿ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಶಾಸಕರು ಭಾಗಿಯಾಗಲಿದ್ದಾರೆ.
ಪಶ್ಚಿಮಘಟ್ಟದ ಪಶ್ಚಿಮಾಭಿಮುಖವಾಗಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಹೊಂಗದಹಳ್ಳ, ಕೇರಿಹೊಳೆ ಹಳ್ಳಗಳಿಗೆ ಅಡ್ಡಲಾಗಿ 8 ಅಣೆಕಟ್ಟುಗಳನ್ನು ನಿರ್ವಿುಸಲಾಗಿದೆ. 24.01 ಟಿಎಂಸಿ ನೀರನ್ನು ಮುಂಗಾರಿನ ಅವಧಿಯಲ್ಲಿ ಪೂರ್ವಾಭಿಮುಖವಾಗಿ ತಿರುಗಿಸಿ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ವ್ಯಾಪ್ತಿಯ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಜತೆಗೆ,527 ಕೆರೆಗಳನ್ನು ತುಂಬಿಸಲಾಗುತ್ತಿದೆ.
ಯೋಜನೆ ಹಿನ್ನೆಲೆ: ಬರಪೀಡಿತ ಕೋಲಾರ, ಚಿಕ್ಕ ಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಸೇರಿ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಗೆ 2008ರಲ್ಲಿ ಅಂದಿನ ಸರ್ಕಾರವು (-ಠಿ;8000 ಕೋಟಿ) ಮಂಜೂರಾತಿ ನೀಡಿತ್ತು. 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿತ್ತು. ಅದರಂತೆ, ಯೋಜನೆ ಕಾಮಗಾರಿ ಆರಂಭವಾಯಿತು. ನಂತರ ಬಂದ ಕಾಂಗ್ರೆಸ್ ಸರ್ಕಾರವು 8 ಸಾವಿರ ಕೋಟಿ ರೂ.ಇದ್ದ ಯೋಜನೆ ವೆಚ್ಚವನ್ನು -13 ಸಾವಿರ ಕೋಟಿ ರೂ. ಪರಿಷ್ಕೃತ ಆಂದಾಜಿಗೆ ಏರಿಕೆ ಮಾಡಿ ಮಂಜೂರಾತಿ ಮಾಡಿತ್ತು. ಯೋಜನೆಯ ಪ್ರಮುಖ ಅಂಗಗಳಾದ ಏತ ನೀರಾವರಿ ಮತ್ತು ಕಾಲುವೆ ನಿರ್ವಣದ ಕಾಮಗಾರಿಗೆ ವೇಗ ನೀಡಿತ್ತು. ಆದರೆ, ಆಗ ತೋರಿದ ಉತ್ಸಾಹ ನಂತರ ಕಡಿಮೆಯಾಯಿತು. ತರುವಾಯು ಬಂದ ಮೈತ್ರಿ ಸರ್ಕಾರ ಸರಿಯಾಗಿ ಆದ್ಯತೆ ನೀಡದ ಪರಿಣಾಮ ಯೋಜನೆಯ ಕಾಮಗಾರಿ ಕುಂಟುತ್ತ ಸಾಗಿತ್ತು. ನಂತರ, ಯೋಜನೆಯ ವೆಚ್ಚ 13 ಸಾವಿರ ಕೋಟಿ ರೂ.ನಿಂದ 25,000 ಕೋಟಿ ರೂ.ಗೆ ಏರಿಕೆಯಾಯಿತು. ಭೂಸ್ವಾಧಿನ ಪ್ರಕ್ರಿಯೆ ಸೇರಿ ನಾನಾ ಸಮಸ್ಯೆಗಳಿಂದ ಕಾಮಗಾರಿ ಕುಂಟುತ್ತ ಸಾಗುತ್ತಿತ್ತು. 2020ರ ಜೂನ್ನೊಳಗೆ ಪೂರ್ತಿಯಾಗಬೇಕಿದ್ದ ಈ ಯೋಜನೆಯ ಮೊದಲನೆಯ ಹಂತದ ಕಾಮಗಾರಿ ಈಗ ಪೂರ್ಣಗೊಂಡಿದೆ.
2026-27ಕ್ಕೆ ಪೂರ್ಣ : ಪ್ರಸಕ್ತ ವಿಯರ್-3 ಅನ್ನು ಹೊರತುಪಡಿಸಿ ಉಳಿದ ಎಲ್ಲ ವಿಯರ್ಗಳಿಂದ ಸೆ.6ರಂದು ನೀರನ್ನೆತ್ತಿ ಗುರುತ್ವ ಕಾಲುವೆಗೆ ಪೂರೈಸಲು ಯೋಜಿಸಲಾಗಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು 2026-27ನೇ ಸಾಲಿನ ಅಂತ್ಯದಲ್ಲಿ ಪೂರ್ಣ ಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ದಶಕದ ನಂತರ ಸಾಕಾರವಾಗುತ್ತಿದೆ. ಬಯಲುಸೀಮೆಯ ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸುವ ಈ ಯೋಜನೆಯು ಮೊದಲ ಹಂತದಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ಹರಿಯಲಿದೆ. ರಾಜ್ಯದ ಇತಿಹಾಸದಲ್ಲಿಯೇ ಶುಕ್ರವಾರ ಮರೆಯಲಾರದ ದಿನ. ಅಲಮಟ್ಟಿಯ ನಂತರ ಅತಿ ದೊಡ್ಡ ಯೋಜನೆ ಇದಾಗಿದೆ. | ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ಮುಂಗಾರು ಮಳೆಯ ನಾಲ್ಕು ತಿಂಗಳು ಜೂನ್ 15 ರಿಂದ ಅಕ್ಟೋಬರ್ 15ರವೆರೆಗೆ ಮಳೆಯ ನೀರನ್ನು ಹರಿಸಲಾಗುತ್ತದೆ. ಇದರಿಂದ ಪರಿಸರದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗುವುದಿಲ್ಲ. ಬದಲಿಗೆ, ಹೆಚ್ಚುವರಿ ಮಳೆ ನೀರಿನಿಂದ ಆಗಬಹುದಾದ ಪ್ರವಾಹ ಅಪಾಯದ ನಿಯಂತ್ರಣವೂ ಆಗಲಿದೆ. | ಬಾಲಕೃಷ್ಣ ಯೋಜನೆಯ ಸಹಾಯಕ ಇಂಜಿನಿಯರ್