ಹಿರಿಯೂರು ಕೃಷ್ಣಮೂರ್ತಿ ಅವರದ್ದು ಮೇರು ವ್ಯಕ್ತಿತ್ವ

Krishna Smthi book realese
Published on

ಶಿವಮೊಗ್ಗ: ಅಧ್ಯಾಪಕರು ಆದವರು ಆರ್‌ಎಸ್‌ಎಸ್ ಕಾರ್ಯಕ್ಕೆ ಅಸ್ತಿಭಾರ, ಅಡಿಪಾಯ ಹಾಕಿದ್ದಾರೆ. ಅವರಲ್ಲಿ ಹಿರಿಯೂರು ಕೃಷ್ಣಮೂರ್ತಿ ಅವರು ಒಬ್ಬರು ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಬಣ್ಣಿಸಿದರು.

ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗದ ಹಿರಿಯೂರು ಕೃಷ್ಣಮೂರ್ತಿ ಸಂಸ್ಮರಣಾ ಸಮಿತಿಯಿಂದ ಕೃಷ್ಣಮೂರ್ತಿಗಳ ಸಂಸ್ಕರಣಾ ಗ್ರಂಥ ‘ಕೃಷ್ಣಸ್ಮತಿ’ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶದ ಎಲ್ಲ ಪ್ರಾಂತದಲ್ಲಿ ಗುರುಗಳು, ಅಧ್ಯಾಪಕರಾಗಿದ್ದರು. ಅದರಲ್ಲಿ ಕೃಷ್ಣಮೂರ್ತಿ ಅವರು ಪ್ರಚಾರಕಾಗಿ ಕೆಲಸ ಮಾಡಿ, ಸಂಘದ ಕಾರ್ಯಕ್ಕೆ ಸಮಯ, ನಿಷ್ಠೆ ಎರೆದಿದ್ದು ಅದ್ಭುತ ಇತಿಹಾಸ ಎಂದರು.

ಪುಸ್ತಕದ ಶೀರ್ಷಿಕೆಗಳಲ್ಲಿ ಇರುವಂತೆ ಅವರದ್ದು ಮೇರು ವ್ಯಕ್ತಿತ್ವ, ಅನುಕರಣೆಯ ಸಾಕಾರ ಮೂರ್ತಿ, ಹೂವಿನಂತ ವ್ಯಕ್ತಿತ್ವ. ಒಬ್ಬ ವ್ಯಕ್ತಿಯನ್ನು ನೂರಾರು ಮುಖಗಳಲ್ಲಿ ಪರಿಚಯಿಸುವುದೇ ವ್ಯಕ್ತಿತ್ವದ ಹಿರಿಮೆ. ಹಿರಿಯೂರು ಕೃಷ್ಣಮೂರ್ತಿ ಅವರು ಗತಿಸಿದ 21 ವರ್ಷಗಳ ಬಳಿಕ ಪುಸ್ತಕ ಪ್ರಕಟಗೊಂಡಿದೆ. ಕೃತಿ ವಿಳಂಬವಾದರೂ ಇಂದು ಬಿಡುಗಡೆಗೊಂಡಿದ್ದು ಸಾಂದರ್ಭೋಚಿತವಾಗಿದೆ. ಈ ಪುಸ್ತಕ ನೂರಾರು ಯುವ ಪೀಳಿಗೆಗೆ ಪ್ರೇರಣೆ ಆಗಬೇಕು ಎಂದರು.

ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ ಮಾತನಾಡಿ, ಹಿರಿಯರು ಕೃಷ್ಣಮೂರ್ತಿ ಅವರು ಜನಪ್ರಿಯರೂ ಆಗಿದ್ದರು. ಆದರೆ ಮಹಾನತೆಯೇ ಅವರ ಜನಪ್ರಿಯತೆ. ಅವರೊಬ್ಬ ಮಹಾನ್ ವ್ಯಕ್ತಿ. ಆನೆ ಬದುಕಿದ್ದಾಗ ಎಷ್ಟು ಬೆಲೆಯೋ ಕಾಲವಾದ ಬಳಿಕ ಅದಕ್ಕಿಂತ ಅಮೂಲ್ಯವಾಗಿರುತ್ತದೆ. ಅದೇ ರೀತಿ ಹಿರಿಯೂರು ಕೃಷ್ಣಮೂರ್ತಿ ಅವರ ವ್ಯಕ್ತಿತ್ವ ಎಂದರು.

ಸಮಿತಿ ಸಂಚಾಲಕ ಎ.ಜೆ.ರಾಮಚಂದ್ರ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣಮೂರ್ತಿ ಅವರ ಪತ್ನಿ ಉಮಾ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಒಡಿಸ್ಸಾ ಕೇಂದ್ರೀಯ ವಿವಿ ಕುಲಾಧಿಪತಿ ಪ್ರೊ. ಪಿ.ವಿ.ಕೃಷ್ಣಭಟ್, ಆರ್‌ಎಸ್‌ಎಸ್ ಸಂಘ ದಕ್ಷಿಣ ಪ್ರಾಂತ ಸಹಕಾರ್ಯವಾಹ ಟಿ.ಪಟ್ಟಾಭಿರಾಮ, ಹಿರಿಯ ಪ್ರಚಾರಕ ಭ.ಮ.ಶ್ರೀಕಂಠ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಎಂಎಲ್‌ಸಿ ಸಿ.ಟಿ.ರವಿ, ಮಾಜಿ ಎಂಎಲ್ಸಿ ಎಸ್.ರುದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯೂರು ನನಗೆ ಹಿರಿಯಣ್ಣ

ಹಿರಿಯೂರು ಕೃಷ್ಣಮೂರ್ತಿ ಅವರು ನೆಲೆ, ಚಿಂತನೆಗಳನ್ನು ವಿಸ್ತರಿಸಿಕೊಂಡು ಆದರ್ಶವಾಗಿ ಬದುಕಿದವರು. ತಾವು ಬೆಳೆಯುವ ಜತೆಗೆ ತಮ್ಮ ಸಂಪರ್ಕಕ್ಕೆ ಬಂದವರನ್ನು ಬೆಳೆಸಿದರು. ಅಸಮಾನ್ಯ ವ್ಯಕ್ತಿತ್ವ ಅವರದ್ದು. ಅಸಂಖ್ಯಾತರಿಗೆ ಗುರುಗಳಾಗಿದ್ದಾರೆ. ನಮಗೆ ಹಿರಿಯಣ್ಣನಂತಿದ್ದರು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ರಾಜಕೀಯ ಸಮಸ್ಯೆಗಳು ಎದುರಾದಗಲೂ ಅವರ ಸಲಹೆ ಪಡೆಯುತ್ತಿದ್ದೆ. ಸಿಎಂ ಆಗುವವರೆಗೆ ನಾನೇನು ಸಾಧಿಸಿದರೆ ಅದಕ್ಕೆ ಕಾರಣ ಕೃಷ್ಣಮೂರ್ತಿ ಅದನ್ನು ಸದಾ ಸ್ಮರಿಸುತ್ತೇನೆ. ಮಹಾನ್ ವ್ಯಕ್ತಿಯ ಸ್ಮರಣೆ ಮಾಡಬೇಕು. ಪುಸ್ತಕ ಹೊರತಂದಿರುವುದು ಸಂತಸದ ಸಂಗತಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net