ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಪದ್ಮವಿಭೂಷಣ ಪ್ರಶಸ್ತಿ ಪುರಷ್ಕೃತ ಪಂಡಿತ್ ಚನ್ನುಲಾಲ್ ಮಿಶ್ರಾ ವಿಧಿವಶ| Pandit Channulal Mishra

Untitled design - 2025-10-02T095407.288
Published on

Pandit Channulal Mishra: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಪಂಡಿತ್ ಚನ್ನುಲಾಲ್ ಮಿಶ್ರಾ(89) ಅವರು ಇಂದು (ಅ. 2) ಬೆಳಗ್ಗೆ 4 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಪುತ್ರಿಯ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ತಂದೆಯ ನಿಧನ ಬಗ್ಗೆ ಪಿಟಿಐಗೆ ಮಾಹಿತಿ ನೀಡಿರುವ ಪುತ್ರಿ ನಮ್ರತಾ ಮಿಶ್ರಾ, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಕಳೆದ 17-18 ದಿನಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ಮನೆಯಲ್ಲಿ ನಿಧನರಾದರು ಎಂದು ತಿಳಿಸಿದ್ದಾರೆ.

ಚನ್ನುಲಾಲ್ ಮಿಶ್ರಾ ಅವರ ಅಂತ್ಯಕ್ರಿಯೆ ಸಂಜೆ 5 ಗಂಟೆಗೆ ವಾರಣಾಸಿಯಲ್ಲಿ ನಡೆಯಲಿದೆ ಎನ್ನಲಾಗಿದೆ. ಅವರು ತಮ್ಮ ಮಗ, ತಬಲಾ ವಾದಕ ರಾಮಕುಮಾರ್ ಮಿಶ್ರಾ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಚನ್ನುಲಾಲ್ ಮಿಶ್ರಾ ಅವರ ನಿಧನಕ್ಕೆ ಪ್ರಧಾನಿ ಮೋದಿ ಎಕ್ಸ್​ನಲ್ಲಿ ಶ್ರದ್ದಾಂಜಲಿ ಅರ್ಪಿಸಿದ್ದು, ಭಾರತೀಯ ಕಲೆ ಮತ್ತು ಸಂಸ್ಕೃತಿಯ ಸಮೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಖ್ಯಾತ ಶಾಸ್ತ್ರೀಯ ಗಾಯಕ ಪಂಡಿತ್ ಛನ್ನುಲಾಲ್ ಮಿಶ್ರಾ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಶಾಸ್ತ್ರೀಯ ಸಂಗೀತವನ್ನು ಜನಸಾಮಾನ್ಯರಿಗೆ ತಲುಪಿಸಿದ್ದಲ್ಲದೆ, ವಿಶ್ವ ವೇದಿಕೆಯಲ್ಲಿ ಭಾರತೀಯ ಸಂಪ್ರದಾಯಗಳನ್ನು ಸ್ಥಾಪಿಸುವಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಪ್ರೀತಿ ಮತ್ತು ಆಶೀರ್ವಾದಗಳನ್ನು ಯಾವಾಗಲೂ ಪಡೆದಿರುವುದು ನನ್ನ ಅದೃಷ್ಟ. 2014 ರಲ್ಲಿ ವಾರಣಾಸಿ ಸ್ಥಾನಕ್ಕೆ ಅವರು ನನ್ನ ಪ್ರಸ್ತಾಪಕರಾಗಿದ್ದರು. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಬರೆದಿದ್ದಾರೆ.

ಚನ್ನುಲಾಲ್ ಮಿಶ್ರಾ ಅವರಿಗೆ 2010 ಜನವರಿ 25ರಂದು ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. 2020ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net