ಹಿಂದುತ್ವವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ

12sri-1
ಶೃಂಗೇರಿಯಲ್ಲಿ ಆಯೋಜಿಸಿದ್ದ ಮೊಸರು ಕುಡಿಕೆ ಉತ್ಸವ ಸಭಾ ಕಾರ್ಯಕ್ರಮವನ್ನು ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ದಿವೀರ್ ಮಲ್ನಾಡ್ ಉದ್ಘಾಟಿಸಿದರು. ಸುರೇಶ್, ನಾಗೇಶ್‌ಕಾಮತ್, ಹಾರಿಕಾ, ರವಿಸಂಜಯ್ ಇದ್ದರು.
Published on

ಶೃಂಗೇರಿ: ಹಿಂದು ಧರ್ಮದಲ್ಲಿ ಹುಟ್ಟುವುದು ಸಾಮಾನ್ಯ ವಿಚಾರವಲ್ಲ. ಹಿಂದುವಾಗಿ ಹುಟ್ಟಲು ಏಳು ಜನ್ಮದ ಪುಣ್ಯ ಮಾಡಿರಬೇಕು. ನಾವು ಹಿಂದು ಎಂದು ಹೆಮ್ಮೆಯಿಂದ ಹೇಳಿಕೊಂಡು ಸಂಘಟಿತರಾದಾಗ ಮಾತ್ರ ಸನಾತನ ಮೌಲ್ಯ ಉತ್ಕೃಷ್ಟ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ ಎಂದು ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.
ಪಟ್ಟಣದ ಡಾ.ವಿ.ಆರ್.ಗೌರಿಶಂಕರ್ ಸಭಾಂಗಣದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಮೊಸರು ಕುಡಿಕೆ ಉತ್ಸವದಲ್ಲಿ ದಿಕ್ಸೂಚಿ ಭಾಷಣ ಮಾತನಾಡಿ, ಸನಾತನ ಧರ್ಮದ ಅವಶ್ಯಕತೆ ಏನು? ಎಂದು ಪ್ರಶ್ನಿಸುವರು ನಮ್ಮಲ್ಲಿ ಸಾಕಷ್ಟು ಜನರಿದ್ದಾರೆ. ನಮ್ಮ ಧರ್ಮ ಮಾಡುವ ಪೂಜೆ, ಹೋಮ ಹವನಗಳು ಅವರ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆಯೇ? ಎಂದು ಪ್ರಶ್ನಿಸಬೇಕು ಎಂದರು.
ಸನಾತನ ಧರ್ಮನಾಶ ಮಾಡುವುದು ಅಷ್ಟು ಸುಲಭವಲ್ಲ. ಸನಾತನಿಗಳು ಎರಡು ಕೆಜಿ ಅಕ್ಕಿಗಾಗಿ ಮತಾಂತರ ಆಗುವವರಲ್ಲ. ಪ್ರಾಣ ಪಣಕ್ಕಿಟ್ಟು ಧರ್ಮ ಉಳಿಸುವರು. ನಮ್ಮ ಪೂರ್ವಿಕರು ಮೊಗಲರು,ಡಚ್ಚರು ಆಕ್ರಮಣ ಮಾಡಿದಾಗ ಸನಾತನ ಧರ್ಮಕ್ಕಾಗಿ ಸ್ವಹಿತವಿಲ್ಲದೆ ದುಡಿದಿದ್ದಾರೆ. ಸಾವಿರಾರು ವರ್ಷಗಳಿಂದ ಹಿಂದು ಧರ್ಮದ ಮೇಲೆ ನೂರಾರು ಜನಾಂಗದವರು ದಾಳಿ ನಡೆಸಿದ್ದಾರೆ. ಆದರೆ ಅವರಿಗೆ ಸನಾತನ ಧರ್ಮದ ಮೂಲ ಹುಡುಕಲು ಸಾಧ್ಯವಾಗಲಿಲ್ಲ. ನಮ್ಮ ಧರ್ಮದ ಮೂಲ ಅಗ್ನಿ, ವಾಯುವನ್ನು ಪೂಜಿಸುವುದರಲ್ಲಿದೆ. ಸೂರ್ಯನಿಗೆ ಅರ್ಘ್ಯ ಸಮರ್ಪಿಸುವುದರಲ್ಲಿದೆ. ಹಾಗಾಗಿ ಹಿಂದುತ್ವವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದರು.
ಅನ್ಯಮತೀಯರಿಂದ ನಮಗೆ ಯಾವುದೇ ಭಯವಿಲ್ಲ. ಹಿಂದುಗಳಾಗಿ ಹುಟ್ಟಿ ಜಾತ್ಯತೀತ ಹೆಸರಿನಲ್ಲಿ ಧರ್ಮ ಒಡೆಯುವ ಕಾರ್ಯತಂತ್ರ ಅವಿರತವಾಗಿ ನಡೆಯುತ್ತಿದೆ. ಇದರಿಂದ ಧರ್ಮ ರಕ್ಷಣೆ ಅಸಾಧ್ಯ. ಹಿಂದುಗಳನ್ನು ಸುಲಭವಾಗಿ ಅನ್ಯಮತೀಯರು ಸೆಳೆದುಕೊಳ್ಳುತ್ತಿದ್ದಾರೆ. ನಾವು ಜಾಗೃತರಾಗಬೇಕು. ಲವ್‌ಜಿಹಾದ್‌ನಿಂದ ಹಿಂದು ಹೆಣ್ಣುಮಕ್ಕಳು ಪಡೆದ ಸಂಕಷ್ಟಗಳ ಬಗ್ಗೆ ಪಾಲಕರು ತಮ್ಮ ಮಕ್ಕಳಲ್ಲಿ ಅರಿವು ಮೂಡಿಸಬೇಕು. ನಮ್ಮ ಧರ್ಮದಲ್ಲಿ ಎಲ್ಲ ಪಂಗಡವರನ್ನು ತೆರೆದ ಹೃದಯದಿಂದ ಸ್ವಾಗತಿಸ ಬೇಕಿದೆ.ಪ.ಜಾತಿ ಹಾಗೂ ಪಂಗಡದವರಿಗೆ ಮೆಕಾಲೆ ಬಂದ ಬಳಿಕ ಶಿಕ್ಷಣ ದೊರಕಿತು ಎಂದು ಇತ್ತೀಚೆಗೆ ರಾಜ್ಯದ ನಾಯಕರು ಹೇಳಿಕೆ ನೀಡಿದ್ದಾರೆ. ವಾಲ್ಮೀಕಿ, ವ್ಯಾಸಮಹರ್ಷಿ, ಕನಕದಾಸರಿಗೆ ಸಂಸ್ಕೃತಭಾಷೆ ಕಲಿಸಿರುವುದು ಮೆಕಾಲೆ ಅಲ್ಲ ಎಂಬುದನ್ನು ಅವರು ಅರಿಯಬೇಕು ಎಂದರು.
ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯಲ್ಲಿ ಆರು ತಂಡಗಳು ಭಾಗವಹಿಸಿದ್ದವು. ಶ್ರಂಗೇರಿ ಶ್ರೀಮಠ ತಂಡ ಪ್ರಥಮಸ್ಥಾನ ಪಡೆದು 22,222 ರೂ.ನಗದು, ಟ್ರೋಫಿ ಜೊತೆ ಪ್ರೋತ್ಸಾಹ ಬಹುಮಾನ ಪಡೆದುಕೊಂಡಿತು.
ಪಪಂ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್, ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ದಿವೀರ್ ಮಲ್ನಾಡ್, ವಿಎಚ್‌ಪಿ ವಿಭಾಗ ಸಹ ಕಾರ್ಯದರ್ಶಿ ಮಹೇಂದ್ರ, ಜಿಲ್ಲಾಧ್ಯಕ್ಷ ಸುರೇಶ್, ಬಜರಂಗದಳದ ಜಿಲ್ಲಾ ಸಂಯೋಜಕ ಅಜಿತ್ ಕುಲಾಲ್, ತಾಲೂಕು ಸಂಯೋಜಕ ರವಿ ಸಂಜಯ್ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net