

ಚಿಕ್ಕಮಗಳೂರು: ಗುರು ದತ್ತಾತ್ರೇಯ ಪೀಠದಲ್ಲಿ 16ನೇ ಶತಮಾನದಿಂದಲೇ ಹಿಂದು ಪೂಜಾ ಪದ್ಧತಿ ಮಾತ್ರ ರೂಢಿಯಲ್ಲಿತ್ತು ಎಂದು ಹಿಂದೆ ದತ್ತಪೀಠ ಸಂವರ್ಧನಾ ಸಮಿತಿಯಲ್ಲಿದ್ದ ದಿ. ವಿಠ್ಠಲ್ ರಾವ್ ಬರೆದಿರುವ ‘ಟ್ರು ಫ್ಯಾಕ್ಟ್ಸ್ ಎಬೌಟ್ ಶ್ರೀ ದತ್ತಾತ್ರೇಯ ಪೀಠ ಡಿಸ್ಪ್ಯೂಟ್’ ಕೃತಿಯಲ್ಲಿ ಉಲ್ಲೇಖವಾಗಿದೆ.
ದತ್ತಪೀಠಕ್ಕೆ ಸಮೀಪದ ಕಡೆಗದ್ದೆ ಗ್ರಾಮವನ್ನು ರಾಣಿ ಕೆಳದಿ ಚನ್ನಮ್ಮ ಇನಾಂ ಆಗಿ ನೀಡಿದ್ದಳು. ನಂತರ ಬಂದ ಆನೆಗೊಂದಿ ಅರಸರು ಸಣ್ಣಪುಟ್ಟ 20 ಗ್ರಾಮಗಳನ್ನು ದತ್ತಪೀಠಕ್ಕೆ ಇನಾಂ ಆಗಿ ನೀಡಿದರೆನ್ನುವ ಅಂಶ ಸಹ ದಾಖಲೆಗಳಲ್ಲಿ ಉಲ್ಲೇಖವಿದೆ. ಮುಂದೆ ಮಲ್ಲಿಕಾಫರ್ ಆಡಳಿತಾವಧಿಯಲ್ಲಿ ಸುತ್ತಲಿನ ಮಠಗಳು, ಹಿಂದು ಶ್ರದ್ಧಾ ಕೇಂದ್ರಗಳನ್ನು ವಶಕ್ಕೆ ಪಡೆದ ಕಾರಣ 1737ರವರೆಗೆ ದತ್ತಪೀಠದಲ್ಲಿ ಯಾವುದೆ ನಿರ್ವಹಣೆ ಇರಲಿಲ್ಲ. ಇದೇ ಸಂದರ್ಭ ಅರಬ್ ಅರಸರ ಆಡಳಿತದಲ್ಲಿ ಪೀಠಕ್ಕೆ ವ್ಯವಸ್ಥಾಪಕರನ್ನಾಗಿ ಶಾಖಾದ್ರಿಯನ್ನು ನೇಮಿಸಲಾಯಿತು. 18ನೇ ಶತಮಾನದಲ್ಲಿ ಸೂಫಿ ಸಂತ ಹಜರತ್ ದಾದಾ ಹಯಾತ್ ಮೀರ್ ಖಲಂದರ್ ದತ್ತಪೀಠ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ದತ್ತಾತ್ರೇಯರಿಂದ ಪ್ರಭಾವಿತರಾದ ನಾಥ ಪಂಥದ ಸಂತರು ಈ ಶ್ರದ್ಧಾಕೇಂದ್ರಕ್ಕೆ ನಡೆದುಕೊಳ್ಳತೊಡಗಿದರು. ಕಾಲ ಕ್ರಮೇಣ ಈ ಕೇಂದ್ರ ಹಿಂದು-ಮುಸ್ಲಿಮರ ಯಾತ್ರಾ ಸ್ಥಳವಾಯಿತು. ನಂತರ ಮೈಸೂರು ಸಂಸ್ಥಾನದ ಹೈದರಾಲಿ ಶ್ರೀರಂಗಪಟ್ಟಣದ ಇಸ್ಮಾಯಿಲ್ ಶಾಖಾದ್ರಿ ಎಂಬುವರನ್ನು ಪೀಠದ ದರೋಜಿಯನ್ನಾಗಿ ನೇಮಿಸಿದ. ಮುಂದೆ ಪೀಠದ ಇನಾಂ ಜಮೀನು ಅನ್ಯಕ್ರಾಂತವಾಗಲು ಆರಂಭವಾಯಿತು. ಶಾಖಾದ್ರಿ ಕುಟುಂಬದ ಸದಸ್ಯರ ಮೃತದೇಹಗಳನ್ನು ಪೀಠದ ಸಮೀಪ ಸಂಸ್ಕಾರ ಮಾಡಿ ಗೋರಿಗಳನ್ನು ನಿರ್ವಿುಸಲಾಯಿತು. ಅಲ್ಲಿದ್ದ ಹಿಂದು ಧಾರ್ವಿುಕ ಆಚರಣೆಗಳನ್ನು ನೇಪಥ್ಯಕ್ಕೆ ಸರಿಸುತ್ತ ಬಂದಾಗ ಹಿಂದುಗಳ ಭಾವನೆ ಕೆರಳಿಸಲು ಕಾರಣವಾಯಿತು ಎಂದು ಕೃತಿಯಲ್ಲಿ ಬರೆದಿದ್ದಾರೆ.
ವಶಕ್ಕೆ ಪಡೆಯಲು ವಕ್ಪ್ ಮಂಡಳಿ ಯತ್ನ: ಪೀಠವನ್ನು ಸಂಪೂರ್ಣವಾಗಿ ಇಸ್ಲಾಂ ಆಚರಣೆಗೆ ಒಳಪಡಿಸುವ ಪ್ರಯತ್ನದ ನಡುವೆ 1976ರಲ್ಲಿ ವಕ್ಪ್ ಮಂಡಳಿ ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿತು. ಇದರ ವಿರುದ್ಧ ಹಿಂದು ಸಂಘಟನೆಗಳು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ ಕಾರಣ ಜಿಲ್ಲಾ ನ್ಯಾಯಾಲಯ ದತ್ತಪೀಠ ಧಾರ್ವಿುಕ ದತ್ತಿ ಆಯುಕ್ತರ ಅಧೀನದಲ್ಲಿರುವುದರಿಂದ ಅದು ಮುಜರಾಯಿ ಇಲಾಖೆಗೆ ಸೇರಿದ್ದು ಎನ್ನುವ ತೀರ್ಪು ನೀಡಿತ್ತು. 1999ರಿಂದ ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಪೀಠದ ಹೋರಾಟ ಕೈಗೆತ್ತಿಕೊಂಡಿತು. ಇದೇವೇಳೆ 1975ರ ಯಥಾಸ್ಥಿತಿ ಕಾಪಾಡಿಕೊಳ್ಳಲು ಸುಪ್ರೀಂ ಕೋರ್ಟ್ ಆದೇಶಿಸಿತು. ಮುಂದೆ ವಿವಾದ ತೀವ್ರಗೊಳ್ಳುತ್ತಲೇ ಸಾಗಿತು.
ಬಾಬಾ ಬುಡನ್ಗಿರಿ ಶ್ರೀ ಗುರು ದತ್ತ ಪೀಠದ ಪೂಜೆಗೆ ಮೌಲ್ವಿ ನೇಮಕ ರದ್ದು ಮಾಡಿ ಹೈಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹ. ದತ್ತ ಪೀಠದ ವಿಚಾರದಲ್ಲಿ ಹಿಂದು ಗಳ ಹೋರಾಟಕ್ಕೆ ಜಯ ಸಿಕ್ಕಿದೆ. | ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ದತ್ತಪೀಠದ ನಿರ್ವಹಣೆಗೆ ಸಂಬಂಧಿಸಿದಂತೆ 1973ರಲ್ಲಿ ವಕ್ಪ್ ಮಂಡಳಿ ಹೊರಡಿಸಿದ್ದ ಆದೇಶವನ್ನು ಚಿಕ್ಕಮಗಳೂರು ಸಿವಿಲ್ ನ್ಯಾಯಾಲಯ ಅಸಿಂಧುಗೊಳಿಸಿ 1976ರಲ್ಲಿ ಆದೇಶಿಸಿತ್ತು. ಅಲ್ಲಿಂದ ಆರಂಭವಾದ ವಿವಾದ ಸುಪ್ರೀಂಕೋರ್ಟ್ವರೆಗೆ ತಲುಪಿತ್ತು. ಹಲವು ಸುತ್ತಿನಲ್ಲಿ ಸುದೀರ್ಘ ವಿಚಾರಣೆ ನಡೆದು, 1989ರ ಫೆ.25ರಂತೆ ಇದ್ದ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ 2010ರ ಮಾ.10ರಂದು ಅಂದಿನ ಧಾರ್ವಿುಕ ದತ್ತಿ ಇಲಾಖೆ ಆಯುಕ್ತರು ಸುಪ್ರೀಂಕೊರ್ಟ್ಗೆ ವರದಿ ಸಲ್ಲಿಸಿ, ಪ್ರತಿನಿತ್ಯ ಪೂಜೆಗಳನ್ನು ನೆರವೇರಿಸಲು ಆಡಳಿತ ಸಮಿತಿಯು ಹಿಂದು ಅರ್ಚಕರನ್ನು ನೇಮಿಸಬೇಕು ಎಂದು ತಿಳಿಸಿದ್ದರು. ಅದನ್ನು ಸಜ್ಜಾದ ನಶೀನ್ ಹಾಗೂ ಇತರ ಪ್ರತಿವಾದಿಗಳು ಆಕ್ಷೇಪಿಸಿದ್ದರು. ಆಗ ಸರ್ಕಾರ ಪ್ರಕರಣದಲ್ಲಿ ಸೂಕ್ಷ್ಮ ವಿಚಾರಗಳು ಅಡಗಿದ್ದು, ಸಚಿವ ಸಂಪುಟದ ಮುಂದೆ ಚರ್ಚೆ ಮಾಡಿ, ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸುಪ್ರೀಂಕೋರ್ಟ್ಗೆ ತಿಳಿಸಿತ್ತು. ಅದನ್ನ ಪರಿಗಣಿಸಿದ್ದ ಸುಪ್ರೀಂ ಕೊರ್ಟ್, 2015ರ ಸೆ.3ರಂದು ಅರ್ಜಿಯನ್ನು ಇತ್ಯರ್ಥಪಡಿಸಿತ್ತು. ಆದರೆ, ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ, ಸಚಿವ ಸಂಪುಟದ ಉಪ ಸಮಿತಿಯ ವರದಿಯಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ದಾಸ್ ಅವರ ನೇತೃತ್ವದಲ್ಲಿ ಇತಿಹಾಸ ತಜ್ಞ ಷ. ಶೆಟ್ಟರ್, ಸಂಶೋಧಕ ರಹಮತ್ ತರೀಕೆರೆ ಅವರನ್ನೊಳಗೊಂಡ ಸಮಿತಿ ರಚಿಸಿತ್ತು. ಆ ಸಮಿತಿಯ ಶಿಫಾರಸಿನಂತೆ ದತ್ತಪೀಠದ ಪೂಜೆ ನೆರವೇರಿಸಲು ಮುಸ್ಲಿಂ ಮೌಲ್ವಿಯನ್ನು ನೇಮಿಸಿ 2018ರ ಮಾ.19ರಂದು ಆದೇಶಿಸಿತ್ತು. ಅದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
2010ರಲ್ಲಿ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸುವಾಗ ಅಂದಿನ ಧಾರ್ವಿುಕ ದತ್ತಿ ಆಯುಕ್ತರ ಒಟ್ಟು 1,015 ಜನ/ಸಂಸ್ಥೆಗಳಿಂದ ಹೇಳಿಕೆ ಪಡೆದಿದ್ದು, ಅವರಲ್ಲಿ ಬಹುತೇಕ ಮಂದಿ ಹಿಂದು ಹಾಗೂ ಮುಸ್ಲಿಂ ಸಮುದಾಯದ ಇಬ್ಬರೂ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು ಎಂದು ಹೇಳಿದ್ದಾರೆ. ಇವರಲ್ಲಿ, 1969ರಿಂದ 1975ರವರೆಗೆ ಮುಜಾವರ್ ಆಗಿದ್ದ ಎಂ.ಎನ್. ಬಾಷಾ ಅವರ ಹೇಳಿಕೆಯೂ ಇದ್ದು, ದೇವಾಲಯದಲ್ಲಿದ್ದ ಪಾದುಕೆಗಳನ್ನು ಬ್ರಾಹ್ಮಣ ಅಥವಾ ಲಿಂಗಾಯತ ಅರ್ಚಕರು ಅವರ ಸಂಪ್ರದಾಯದ ಪ್ರಕಾರ ಪೂಜೆ ನೆರವೇರಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಜತೆಗೆ, ಹಳೆಯ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗಬೇಕೆಂದು ಬಾಷಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ್ಝಾಖಲೆಗಳ ಪ್ರಕಾರ ಮೈಸೂರು ಮಹಾರಾಜರು ದತ್ತಾತ್ರೇಯ ದೇವರು ಹಾಗೂ ಬಾಬಾ ಬುಡನ್ ದರ್ಗಾ ಎರಡಕ್ಕೂ ಪ್ರತ್ಯೇಕವಾಗಿ ದತ್ತಿ ಹಾಗೂ ಅನುದಾನಗಳನ್ನು ನೀಡಿದ್ದಾರೆ. 1995ರ ಬಳಿಕ ಇನಾಮು ನಿಷೇಧಗೊಂಡ ಬಳಿಕ ಪ್ರತ್ಯೇಕ ತಸ್ತಿಕ್ ನಿಗದಿಪಡಿಸಲಾಗಿದೆ. ಆದರೆ, ಮುಜಾವರ್ ಅವರನ್ನು ನೇಮಕ ಮಾಡಿ, ಅವರಿಗೆ ಮಾತ್ರ ಗುಹೆಯೊಳಗೆ ಪ್ರವೇಶಿಸಲು ಹಾಗೂ ಹಿಂದು ಮತ್ತು ಮುಸ್ಲಿಮರಿಬ್ಬರಿಗೂ ತೀರ್ಥ ವಿತರಿಸಲು ಅವಕಾಶ ಕಲ್ಪಿಸಲಾಗಿದ್ದು, ಪಾದುಕೆಗಳಿಗೆ ಹೂವುಗಳನ್ನಿಡಲು ಹಾಗೂ ನಂದಾದೀಪ ಬೆಳಗಿಸಲು ಅವಕಾಶ ನೀಡಲಾಗಿದೆ. ಈ ವಿಚಾರಗಳು ಮುಸ್ಲಿಮರ ಆಚರಣೆಗಳಿಗೆ ವಿರುದ್ಧವಾಗಿವೆ. ಏಕೆಂದರೆ, ಇಸ್ಲಾಂ ಧರ್ಮದಲ್ಲಿ ವಿಗ್ರಹಾರಾಧನೆಗೆ ಮಾನ್ಯತೆ ಇಲ್ಲ.
ರಾಮಜನ್ಮಭೂಮಿ ತೀರ್ಪಿನ ಉಲ್ಲೇಖ: ‘‘ನಂಬಿಕೆ ಎನ್ನುವುದು ಆಸ್ತಿಕನೊಬ್ಬನ ವೈಯಕ್ತಿಕ ವಿಚಾರ. ಅದು ಬೂಟಾಟಿಕೆಯಲ್ಲದ ಹಾಗೂ ಸಾಚಾತನದಿಂದ ಕೂಡಿದ ನಂಬಿಕೆ ಎನ್ನುವುದು ನ್ಯಾಯಾಲಯಕ್ಕೆ ಮನವರಿಕೆಯಾದಾಗ ಅದನ್ನು ಗುರುತಿಸಿ, ಮನ್ನಣೆ ನೀಡಬೇಕಾಗುತ್ತದೆ. ಇದು ಹಿಂದು, ಇಸ್ಲಾಂ ಸೇರಿ ಎಲ್ಲ ಧರ್ಮಗಳಿಗೂ, ಗ್ರಂಥಗಳಿಗೂ ಅನ್ವಯಿಸುತ್ತದೆ. ಸಮಾನ ಗೌರವದ ಸಂಪ್ರದಾಯದಲ್ಲಿ ಜಾತ್ಯತೀತ ಸಂವಿಧಾನದ ಮೌಲ್ಯ ಅಡಗಿರುತ್ತದೆ’ ಎಂದು ರಾಮಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.