ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್​​ ವಿರುದ್ಧ ಅವಹೇಳನಕಾರಿ ಹೇಳಿಕೆ: ಹಿಂದು ಮುಖಂಡನ ಬಂಧನ

Hindu Leader
Published on

ಚೆನ್ನೈ: ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್​​ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಹಿಂದು ಮುಖಂಡನನ್ನು ತಮಿಳುನಾಡು ಪೊಲೀಸರು ಇಂದು ಬಂಧಿಸಿದ್ದಾರೆ.

ಡಿಎಂಕೆ ಜಿಲ್ಲಾ ಮುಖ್ಯಸ್ಥ ಎಸಿ ಮಣಿ ಅವರು ಅರಾನಿ ಪೊಲೀಸ್​ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಹಿಂದು ಮುಖಂಡ ಮಹೇಶ್​ ಎಂಬುವರನ್ನು ಬಂಧಿಸಲಾಗಿದೆ. ಸೆ. 22ರಂದು ಹಮ್ಮಿಕೊಳ್ಳಲಾಗಿದ್ದ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಉದಯನಿಧಿ ಸ್ಟಾಲಿನ್​ ವಿರುದ್ಧ ಮಹೇಶ್​ ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ ಎಂದು ಆರೋಪವಿದೆ.

ಇಂದು ಬೆಳಗ್ಗೆ ಮಹೇಶ್​ ಅವರ ನಿವಾಸದಿಂದ ಅವರನ್ನು ಬಂಧಿಸಿರುವ ಅರಾನಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸನಾತನ ಧರ್ಮದ ಕುರಿತು ಹೇಳಿಕೆ ನೀಡಿರುವ ಸಚಿವ ಉದಯನಿಧಿ ಸ್ಟಾಲಿನ್ ಕೂಡಲೇ ಕ್ಷಮೆಯಾಚಿಸಬೇಕೆಂದು ಕೋರಿದೆ ಹೊರತು ಅವರ ವಿರುದ್ಧ ಯಾವುದೇ ಕೆಟ್ಟ ಪದ ಬಳಸಿಲ್ಲ ಎನ್ನುವ ಮೂಲಕ ಮಹೇಶ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವೇದಿಕೆಯಲ್ಲಿ ನನ್ನ ಭಾಷಣದ ಸಮಯದಲ್ಲಿ, ಸನಾತನ ಧರ್ಮದ ವಿರುದ್ಧದ ಹೇಳಿಕೆಗಳಿಗೆ ಉದಯನಿಧಿ ಕ್ಷಮೆಯಾಚಿಸುವ ಅಗತ್ಯವನ್ನು ನಾನು ಒತ್ತಿಹೇಳಿದೆ. ಉದಯನಿಧಿ ಅವರು ತಮ್ಮ ಹೇಳಿಕೆಗಳಲ್ಲಿ 'ನಿರ್ಮೂಲನೆ' ಪದವನ್ನು ಬಳಸಿರುವುದರಿಂದ ಸೆಕ್ಷನ್ 302ರ ಅಡಿಯಲ್ಲಿ ಅವರ ವಿರುದ್ಧ ಕಾನೂನು ಕ್ರಮಕ್ಕೆ ನಾನು ಒತ್ತಾಯಿಸಿದೆ ಎಂದು ಮಹೇಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆರೋಪಿ ಮಹೇಶ್ ವಿರುದ್ಧ ದ್ವೇಷವನ್ನು ಉತ್ತೇಜಿಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಪ್ರಚೋದನಕಾರಿ ಭಾಷಣ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net