ಲವ್ ಜಿಹಾದ್ ತನಿಖೆಗೆ ವಿಶೇಷ ತನಿಖಾದಳ ರಚಿಸಲು ಹಿಂದು ಸಂಘಟನೆಗಳ ಆಗ್ರಹ

Hindu
Published on

ಬೆಂಗಳೂರು: ಏ.18 ರಂದು ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯನ್ನು ಫಯಾಜ್ ಎಂಬ ಯುವಕ ಬರ್ಬರವಾಗಿ ಹತ್ಯೆ ಮಾಡಿದ್ದು, ಈ ಪ್ರಕರಣವನ್ನು ಲವ್ ಜಿಹಾದ್ ಹಿನ್ನೆಲೆಯಲ್ಲಿ ತನಿಖೆ ಮಾಡಬೇಕು. ಇಂತಹ ಪ್ರಕರಣಗಳ ತನಿಖೆಗಾಗಿ ವಿಶೇಷ ತನಿಖಾದಳವನ್ನು ರಚಿಸಬೇಕೆಂದು ಆಗ್ರಹಿಸಿ ಹಿಂದು ಸಂಘಟನೆಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿವೆ.

ರಾಜ್ಯಪಾಲರ ಕಾರ್ಯದರ್ಶಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿರುವ ವಿವಿಧ ಹಿಂದು ಸಂಘಟನೆಗಳ ಸದಸ್ಯರು, ಲವ್ ಜಿಹಾದ್ ಹೆಸರಿನಲ್ಲಿ ಹಿಂದು ಯುವತಿಯರನ್ನು ನಕಲಿ ಪ್ರೇಮದ ಜಾಲದಲ್ಲಿ ಸಿಲುಕಿಸಿ, ಅವರನ್ನು ಇಸ್ಲಾಂಗೆ ಮತಾಂತರ ಮಾಡುವ, ಒಪ್ಪದಿದ್ದರೆ ಅವರನ್ನು ಬರ್ಬರವಾಗಿ ಹತ್ಯೆ ಮಾಡುವ ಘಟನೆ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದೆ. ಇದರ ಹಿಂದೆ ವ್ಯವಸ್ಥಿತ ಜಿಹಾದಿ ಮತಾಂಧರು ಕೆಲಸ ಮಾಡುತ್ತಿದ್ದು ಈ ಬಗ್ಗೆ ತನಿಖೆಯಾಗಬೇಕು. ಕರ್ನಾಟಕ ಸರಕಾರವು ಇದನ್ನು ವೈಯಕ್ತಿಕ ಪ್ರಕರಣ ಎಂದು ನಿರ್ಲಕ್ಷ್ಯ ಮಾಡುತ್ತಿದೆ. ಇದರಿಂದ ಇಂತಹ ಘಟನೆಗಳು ಮರುಕಳಿಸುವ ಅಪಾಯವಿದೆ. ಈ ಬಗ್ಗೆ ಗಂಭೀರವಾಗಿ ತನಿಖೆ ಮಾಡಲು ಪ್ರತ್ಯೇಕ ತನಿಖಾದಳದ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.

ನಿಯೋಗದಲ್ಲಿ ಹಿಂದು ಜನಜಾಗೃತಿ ಸಮಿತಿಯ ಶರತ್ ಕುಮಾರ್, ರಾಷ್ಟ್ರೀಯ ಹಿಂದೂ ಪರಿಷತ್‌ನ ಸುರೇಶ್ ಗೌಡ, ದುರ್ಗಾ ಸೇನೆಯ ಭವ್ಯ, ಶ್ರೀರಾಮ ಸೇನೆಯ ಎಸ್. ಭಾಸ್ಕರನ್, ಹಿಂದು ಮುಖಂಡ ಅಮರನಾಥ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net