ಹಿಂದು-ಮುಸ್ಲಿಮರ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ

26blrp4
ರಂಜಾನ್ ಹಾಗೂ ಶ್ರೀ ಚನ್ನಕೆಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪೊಲೀಸ್ ಠಾಣೆ ಆವರಣದಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಎಸ್ಪಿ ಎಂ.ಕೆ.ತಮ್ಮಯ್ಯ ಮಾತನಾಡಿದರು.
Published on

ಬೇಲೂರು: ಶ್ರೀ ಚನ್ನಕೇಶವಸ್ವಾಮಿ ದಿವ್ಯ ರಥೋತ್ಸವದಂದು ಸಂಪ್ರದಾಯದಂತೆ ಮುಸ್ಲಿಂ ಕ್ವಾಜಿ ಅವರು ಪ್ರಾರ್ಥನೆ ಮಾಡುತ್ತಾ ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಕೆಲವರು ಹಿಂದು-ಮುಸ್ಲಿಂ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಅಗತ್ಯವಿದ್ದರೆ ಪ್ರಾರ್ಥನೆ ರದ್ದುಪಡಿಸಿ ಸಾಮರಸ್ಯ ಕಾಪಾಡಿ ಎಂದು ಪಟ್ಟಣದ ಉಸ್ಮಾನಿಯ ಮಸೀದಿ ಅಧ್ಯಕ್ಷ ನವೀದ್ ಹೇಳಿದರು.

ಪಟ್ಟಣದ ಬೇಲೂರು ಪೊಲೀಸ್ ಠಾಣಾ ಅವರಣ ರಂಜಾನ್, ಯುಗಾದಿ ಹಾಗೂ ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ನಾವು ವಿದ್ಯಾರ್ಥಿಗಳಿದ್ದಾಗ ರಥ ಎಳೆದು, ಅಲ್ಲಿ ಕೊಡುತ್ತಿದ್ದ ಮಜ್ಜಿಗೆ, ಪಾನಕ ಕುಡಿಯುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ರಥದ ಬಳಿ ಹೋಗಲು ಭಯವಾಗುತ್ತಿದೆ. ಬೇಲೂರಿನಲ್ಲಿ ಶಾಂತಿ ನೆಲೆಸುವ ಉದ್ದೇಶದಿಂದ ಈ ಸಂಪ್ರದಾಯಕ್ಕೆ ಅಂತಿಮ ಹಾಡಬೇಕು ಎಂದರು.

ತಹಸೀಲ್ದಾರ್ ಎಂ.ಮಮತಾ ಮಾತನಾಡಿ, 2023ರಲ್ಲಿ ಚುನಾವಣೆ ಕಾರಣದಿಂದ ದೇಗುಲದ ಜಾತ್ರಾ ಮಹೋತ್ಸವದ ಸಂದರ್ಭ ಸ್ವಲ್ಪ ಮಟ್ಟಿನ ಗೊಂದಲ ಸೃಷ್ಟಿಯಾಗಿತ್ತು. ಆದರೆ 2024ರಲ್ಲಿ ಸುಗಮವಾಗಿ ಜಾತ್ರಾ ಮಹೋತ್ಸವ ನಡೆದಿದೆ. ದೇಗುಲ ಸಂಪ್ರದಾಯಕ್ಕೆ ಧಕ್ಕೆ ಉಂಟಾಗದಂತೆ ಮತ್ತು ಜನಾಭಿಪ್ರಾಯಕ್ಕೆ ತಕ್ಕಂತೆ ಕೆಲಸ ಮಾಡಲಾಗುವುದು ಎಂದರು.

ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ.ತಮ್ಮಯ್ಯ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಕೇವಲ ಪೊಲೀಸರ ಕೆಲಸ ಎಂಬ ಭಾವನೆಯಿಂದ ಹೊರಬಂದು ಸಾರ್ವಜನಿಕರು ಸಹಕಾರ ನೀಡಬೇಕು. ಈ ಭಾರಿ ಅದ್ದೂರಿ ಜಾತ್ರಾ ಮಹೋತ್ಸವ ನಡೆಯುವ ಹಿನ್ನೆಲೆಯಲ್ಲಿ ಹೆಚ್ಚಿನ ಬೀಗಿ ಭದ್ರತೆ ನೀಡಲಾಗುತ್ತಿದೆ. ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬೇಲೂರಿನಲ್ಲಿ ಕಳೆದ ಬಾರಿ ಇರುವ ವಾಹನಗಳ ದಟ್ಟಣೆ ನಿಯಂತ್ರಿಸುವಲ್ಲಿ ಇನ್ಸ್‌ಪೆಕ್ಟರ್ ರೇವಣ್ಣ ಪಾತ್ರ ಉತ್ತಮವಾಗಿತ್ತು. ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಎಂದರು.

ಅರಸೀಕೆರೆ ಡಿವೈಎಸ್‌ಪಿ ಲೋಕೇಶ್, ಪಿಐ ರೇವಣ್ಣ, ಪಿಎಸ್‌ಐ ಶಿವನಾಂದ ಪಾಟೀಲ್, ಚನ್ನಕೇಶವ ದೇಗುಲ ಇಒ ಯೋಗೀಶ್, ಕರವೇ ಅಧ್ಯಕ್ಷ ಚಂದ್ರಶೇಖರ್, ತಾಪಂ ಮಾಜಿ ಸದಸ್ಯ ಪರ್ವತಯ್ಯ, ಮಂಜುನಾಥ್, ವೀರಾಂಜನೇಯಸ್ವಾಮಿ ದೇಗುಲ ಅಧ್ಯಕ್ಷ ಮೋಹನ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net