ಹಿಂದೂ ರಾಷ್ಟ್ರ ಆಗುವುದು ನಿಶ್ಚಿತ

WITH PRESS
ಪ್ರಮೋದ್ ಮುತಾಲಿಕ್
Published on

ಹೊಸಪೇಟೆ : ದೇವರು, ಧರ್ಮ, ಅಭಿವೃದ್ಧಿ ಒಟ್ಟಿಗೆ ಇವೆ. ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲಿಸಿ 400 ಕ್ಕೂ ಹೆಚ್ವು ಸ್ಥಾನ ಪಡೆದು, ಮತ್ತೆ ಬಿಜೆಪಿ ಸರ್ಕಾರ ಬರುವುದರಲ್ಲಿ ಅನುಮಾನವಿಲ್ಲ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಂದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014ರ ಹಿಂದಿನ ಪ್ರಧಾನಿಯೊಬ್ಬರು ದೇವಸ್ಥಾನಕ್ಕೆ ಹೋಗಿರಲಿಲ್ಲ. ಮದರಸಾಗಳಿಗೆ ಹೋಗುತ್ತಿದ್ದರು. ಬಾಬರ್‌ನನ್ನು ಹೊತ್ತು ಮೆರೆಸುತ್ತಿದ್ದರು. ಆದರೆ, 2014ರಲ್ಲಿ ಪ್ರಧಾನಿಯಾದ ಮೋದಿಯವರು ದೇವಸ್ಥಾನಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 400ಕ್ಕಿಂತ ಅಧಿಕ ಸ್ಥಾನ ಗಳಿಸುವುದು ಖಚಿತ. 2024ರ ನಂತರ ಭಾರತ ಹಿಂದೂ ರಾಷ್ಟ್ರ ಆಗುವುದು ಸಹ ನಿಶ್ಚಿತ ಎಂದು ಮುತಾಲಿಕ್ ಅಭಿಪ್ರಾಯಪಟ್ಟರು.

ಜನಸಂಘದ ಪ್ರಣಾಳಿಕೆಯಲ್ಲಿಯೇ ಹಿಂದುತ್ವ, ಗೋಹತ್ಯೆ, ಮತಾಂತರ ನಿಷೇಧಗಳನ್ನು ಹಾಕಿಕೊಂಡಿದೆ. ಬಿಜೆಪಿ ಅದನ್ನು ಮುಂದುವರೆಸಿದೆ. ಹಿಂದು ರಾಷ್ಟ್ರದ ಆಲೋಚನೆ ಮಾಡಲೇಬೇಕು. ಚುನಾವಣೆ ಬಂದಾಗ ಮಾತ್ರ ಅಲ್ಲ. ಪ್ರಧಾನಿ ‌ಮೋದಿ ಅವರು ಹಿಂದುರಾಷ್ಟ್ರದ ಕಡೆ ಹೆಜ್ಜೆ‌ ಇಡುತ್ತಿದ್ದಾರೆ. 2024ರ ನಂತರ ನೂರಕ್ಕೆ ನೂರು ಹಿಂದು ರಾಷ್ಟ್ರವಾಗುತ್ತದೆ. ಯಾರೂ ದೇಶ ಬಿಟ್ಟು ಹೋಗಬೇಕಾಗಿಲ್ಲ, ಇಲ್ಲಿನ ಬಹುಸಂಖ್ಯಾತ ಹಿಂದುಗಳ ಸಂಸ್ಕೃತಿ ಒಪ್ಪಿ ಎಲ್ಲರೂ ಬದುಕು ನಡೆಸಬಹುದು ಎಂದರು.

ದೇಶವೇ ರಾಮನ ಪರವಾಗಿ ನಿಂತಿದ್ದೇ ಬಿಜೆಪಿ, ಆರೆಸ್ಸೆಸ್‌, ವಿಎಚ್‌ಪಿ, ಶ್ರೀರಾಮ ಸೇನೆಯಂತಹ ಸಂಘಟನೆಗಳು. ನಾವು ತ್ಯಾಗ ಮಾಡಿದ್ದೇವೆ. ಕಾಂಗ್ರೆಸ್ ಬಾಬರನ ಪರವಾಗಿ ನಿಂತಿತ್ತು. ರಾಮನ ಹೆಸರು ಎತ್ತಲು ಸಹ ಕಾಂಗ್ರೆಸಿಗರಿಗೆ ಯೋಗ್ಯತೆ ಇಲ್ಲ. ನಾವೂ ರಾಮಮಂದಿರ ನಿರ್ಮಿಸುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳುವುದು ಬರಿ ಸುಳ್ಳು. ಬಜೆಟ್‌ನಲ್ಲಿ ಇದಕ್ಕಾಗಿ ಒಂದು ರೂಪಾಯಿ ಸಹ ನೀಡಿಲ್ಲ. ಮುಸ್ಲಿಮರಿಗೆ, ಕ್ರೈಸ್ತರಿಗೆ ಹಣ ಇಡಲು ನಿಮಗೆ ಸಾಧ್ಯವಿದೆ. ರಾಮನ ದೇವಸ್ಥಾನಕ್ಕೆ ಏಕೆ ಹಣವಿಲ್ಲ?

ಪುಲ್ವಾಮಾ ಘಟನೆಯನ್ನು ಕಾಂಗ್ರೆಸ್ ಆರೋಪ ಮಾಡಿದೆ. ಸೈನಿಕರ ರಕ್ತದ ಮೇಲೆ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಭಯೋತ್ಪಾದಕರನ್ನು ಬಳಸಿ ರಾಜಕಾರಣ ಮಾಡುವ ಕೆಟ್ಟ ಚಾಳಿ ಕಾಂಗ್ರೆಸ್ಸಿಗರಿಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ 3,600ರಷ್ಟು ಲಂಬಾಣಿ ತಾಂಡಾಗಳಿದ್ದು, ಶೇ.50ರಷ್ಟು ತಾಂಡಾಗಳಿಗೆ ಕ್ರೈಸ್ತರು ಪ್ರವೇಶಿಸಿ ಮತಾಂತರ ಯತ್ನದಲ್ಲಿ ತೊಡಗಿದ್ದಾರೆ.  ತಾಂಡಾಗಳ ಬಡತನ, ಅನಕ್ಷರತೆಯನ್ನು ಬಳಸಿಕೊಂಡು, ಅವರಿಗೆ ಆಸೆ ತೋರಿಸಿ ಮಾಡುವ ಮತಾಂತರ ಯತ್ನವನ್ನು ತಕ್ಷಣ ನಿಲ್ಲಿಸಬೇಕು. ಮತಾಂತರ ನಿಷೇಧ ಕಾಯ್ದೆ ಈಗಲೂ ಜಾರಿಯಲ್ಲಿದ್ದು, ಅದನ್ನು ಪಾಲಿಸಬೇಕು. ಈ ಪ್ರಯತ್ನ ನಿಲ್ಲಿಸದಿದ್ದರೆ ಶ್ರೀರಾಮ ಸೇನೆಯಿಂದ ಅವರನ್ನು ಒದ್ದು ಓಡಿಸಲಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net