

ನವದೆಹಲಿ: ಕೊರೊನಾ ಭಯಕ್ಕೆ ಪ್ರಪಂಚವೇ ತತ್ತರಿಸಿದೆ. ಹೀಗಿದ್ದಾಗ ಗೋ ಮೂತ್ರ ಮತ್ತು ಸಗಣಿ ಸೇವನೆ ಮಾಡಿದರೆ ಕೊರೊನಾ ಕಾಟದಿಂದ ತಪ್ಪಿಕೊಳ್ಳಬಹುದು ಎಂದು ಹಿಂದೂ ಮಹಾಸಭಾ ವೇದಿಕೆಯ ಮುಖಂಡರೊಬ್ಬರು ಹೇಳಿದ್ದಾರೆ.
"ಗೋಮೂತ್ರ ಸೇವಿಸುವುದರಿಂದ ಮತ್ತು ಸಗಣಿಯನ್ನು ದೇಹಕ್ಕೆ ಹಚ್ಚಿಕೊಳ್ಳುವುದರಿಂದ ಜನರು ಕೊರೊನಾ ವೈರಸ್ ತಮ್ಮ ದೇಹದೊಳಗೆ ಸೇರದಂತೆ ನೋಡಿಕೊಳ್ಳಬಹುದು. ಗೋವಿನ ಮೂತ್ರ ಅನೇಕ ಖಾಯಿಲೆಗಳಿಗೆ ಔಷಧವಿದ್ದಂತೆ." ಎಂದು ಹಿಂದೂ ಮಹಾಸಭಾ ವೇದಿಕೆಯ ಮುಖಂಡ ಸ್ವಾಮಿ ಚಕ್ರಪಾಣಿ ಮಹಾರಾಜ್ ತಿಳಿಸಿದ್ದಾರೆ.
ಗೋವಿನ ಬಗ್ಗೆ ಮಾತನಾಡಿರುವ ಅವರು, ಗೋಮೂತ್ರ ಔಷಧವೆಂದ ಮಾತ್ರಕ್ಕೆ ಯಾವ್ಯಾವುದೋ ಗೋವಿನ ಮೂತ್ರ ಸೇವಿಸಿದರೆ ಉಪಯೋಗವಿಲ್ಲ. ಬೀದಿಗಳಲ್ಲಿ ಬಿಡಾಡಿ ದನಗಳಾಗಿ ತಿರುಗುವ ದನಗಳ ಗೋಮೂತ್ರದಿಂದ ಉಪಯೋಗವಿಲ್ಲ ಎಂದು ನುಡಿದಿದ್ದಾರೆ. ಸೂಕ್ತ ರೀತಿಯಲ್ಲಿ ಸಾಕಿದ ಗೋವಿನ ಮೂತ್ರದಿಂದ ಕ್ಯಾನ್ಸರ್ನಂತಹ ಕಾಯಿಲೆಯನ್ನು ಸಹ ಗುಣಪಡಿಸಬಹುದು ಎಂದು ಅವರು ತಿಳಿಸಿದ್ದಾರೆ.
ಕೊರೊನಾ ವೈರಸ್ ಚೀನಾದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ಇದುವರೆಗು 425 ಜನರು ಈ ವೈರಸ್ನಿಂದಾಗಿ ಮೃತ ಪಟ್ಟಿರುವುದಾಗಿ ವರದಿಯಾಗಿದೆ. 19,550ಕ್ಕೂ ಹೆಚ್ಚು ಜನರಲ್ಲಿ ವೈರಸ್ ಪತ್ತೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. (ಏಜೆನ್ಸೀಸ್)