

ಶಿವಮೊಗ್ಗ: ನಗರದ ಪ್ರತಿಷ್ಠಿತ ಹಿಂದು ಮಹಾಸಭಾ ಗಣಪತಿಯು ಭಾನುವಾರ ಬೆಳಗಿನ ಜಾವ ಭಕ್ತರ ಹರ್ಷೋದ್ಗಾರದೊಂದಿಗೆ ತುಂಗಾ ನದಿ ತೀರದ ಭೀಮನ ಮಡುವಿನಲ್ಲಿ ಜಲಸ್ತಂಭನ ಮಾಡಲಾಯಿತು. ಶನಿವಾರ ಬೆಳಗ್ಗೆಯಿಂದ ತಡರಾತ್ರಿವರೆಗೂ ಲಕ್ಷಾಂತರ ಭಕ್ತರು ಪಾಲ್ಗೊಂಡು ರಾಜಬೀದಿ ಉತ್ಸವಕ್ಕೆ ಮೆರುಗು ನೀಡಿದರು.
ಬೆಳಗಿನ ಜಾವ 3.50ರ ಸುಮಾರಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಹಿಂದು ಮಹಾಸಭಾ ಗಣಪತಿಗೆ ವಿದಾಯ ಹೇಳಿದರು. ತುಂಗೆಯಲ್ಲಿ ಮೂರು ಬಾರಿ ಮುಳುಗಿಸುತ್ತಿದ್ದಂತೆ ನೆರೆದಿದ್ದವರು ಜೈ ಶ್ರೀರಾಮ್, ಜೈ ವಿನಾಯಕ ಎಂಬ ಹರ್ಷೋದ್ಗಾರ ಮಾಡಿದರು.
ಕೋಟೆ ರಸ್ತೆಯ ಭೀಮೇಶ್ವರ ದೇವಾಲಯದಿಂದ ಆರಂಭಗೊಂಡ ರಾಜಬೀದಿ ಉತ್ಸವವು ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹ್ಮಮದ್ ವೃತ್ತ, ನೆಹರು ರಸ್ತೆ, ಟಿ.ಸೀನಪ್ಪ ಶೆಟ್ಟಿ ವೃತ್ತ, ಜೈಲ್ ವೃತ್ತ, ಶಿವಮೂರ್ತಿ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಕೋಟೆ ಅಂಚೆ ಕಚೇರಿ ರಸ್ತೆ ಮೂಲಕ ಕೋಟೆ ಭೀಮೇಶ್ವರ ದೇವಾಲಯದ ಹಿಂಬದಿಯ ಭೀಮನ ಮಡುವಿಗೆ ಬೆಳಗಿನಜಾವ ಪೊಲೀಸರ ಬಿಗಿ ಭದ್ರತೆಯಲ್ಲಿ ತೆರಳಿತು.