ಬೆಂಗಳೂರು ಬಿಟ್ಟು ಪುಣೆಗೆ ಶಿಫ್ಟ್​ ಆಗ್ತೀನಿ ಎಂದವ ಹೇಳಿದ್ದೇ ಸುಳ್ಳಾ? ಕಡೆಗೂ ಕಳಚಿಬಿತ್ತು ಹಿಂದಿವಾಲನ ಅಸಲಿ ಮುಖ | Kannada

ವಿಜಯವಾಣಿ - 2025-05-25T175152.242
Published on

Kannada: ಇತ್ತೀಚೆಗಷ್ಟೇ ಬೆಂಗಳೂರಿನ ಆನೇಕಲ್​ ತಾಲೂಕಿನ ಎಸ್​ಬಿಐ ಬ್ಯಾಂಕ್​ ಮ್ಯಾನೇಜರ್​, ತಾನು ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ದರ್ಪದ ಮಾತುಗಳನ್ನಾಡಿದ್ದರು. ಬ್ಯಾಂಕಿಗೆ ಬಂದ ಕನ್ನಡಿಗರೊಬ್ಬರು, 'ಮೇಡಂ ಕನ್ನಡದಲ್ಲಿ ಸೇವೆ ನೀಡಿ' ಎಂದು ಹೇಳಿದ್ದಕ್ಕೆ, 'ನಾನು ಕನ್ನಡದಲ್ಲಿ ಮಾತನಾಡಲ್ಲ' ಎಂಬ ಸೊಕ್ಕಿನ ಮಾತುಗಳನ್ನು ನೇರವಾಗಿ ಆಡಿದ್ದರು. ಘಟನೆಯ ವಿಡಿಯೋ ಕ್ಷಣಮಾತ್ರದಲ್ಲಿ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಂತೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಈ ಬೆಳವಣಿಗೆಗಳ ಬೆನ್ನಲ್ಲೇ ಮಹಿಳಾ ಮ್ಯಾನೇಜರ್​ಗೆ ಎಚ್ಚರಿಕೆ ಮಾತ್ರವಲ್ಲದೇ ಸೂರ್ಯನಗರ ಎಸ್​ಬಿಐ ಬ್ರಾಂಚ್​ನಿಂದ ಗೇಟ್​ಪಾಸ್​ ಕೂಡ ಕೊಡಲಾಯಿತು.

ಘಟನೆಯ ವಿಡಿಯೋ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟಾಹಾಕ್ತಿದ್ದಂತೆ ಕೌಶಿಕ್​ ಮುಖರ್ಜಿ ಎಂಬ ವ್ಯಕ್ತಿ, 'ಭಾಷೆಯ ವಿಚಾರಕ್ಕೆ ಎಸ್​ಬಿಐ ಮ್ಯಾನೇಜರ್​ಗೆ ಬಂದ ಸ್ಥಿತಿ, ನನ್ನ ಉದ್ಯೋಗಿಗಳಿಗೆ ಬರುವುದು ಬೇಡ. ನಾನು ಈಗಲೇ ಬೆಂಗಳೂರಿನಿಂದ ನನ್ನ ಕಚೇರಿಯನ್ನು ಪುಣೆಗೆ ಶಿಫ್ಟ್​ ಮಾಡುತ್ತೇನೆ' ಎಂದು ತನ್ನ ಎಕ್ಸ್ ಖಾತೆಯಲ್ಲಿ ಬರೆದು ಹಂಚಿಕೊಂಡಿದ್ದ. ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ಕನ್ನಡಿಗರಲ್ಲಿ ಕಿಚ್ಚು ಹಚ್ಚಿದ ಈತನಿಗೆ ಕನ್ನಡಿಗರು ಹಿಗ್ಗಾಮುಗ್ಗಾ ಥರಾಟೆಗೆ ತೆಗೆದುಕೊಂಡರು. ಆದ್ರೆ, ತನ್ನ ಟೆಕ್ನಾಲಜಿ ಕಂಪನಿ ಬೆಂಗಳೂರಿನಲ್ಲಿದೆ ಎಂದಿದ್ದ ಸುಳ್ಳು ಪ್ರಚಂಡನ ಅಸಲಿ ಮುಖ ಇದೀಗ ಕಡೆಗೂ ಕಳಚಿ ಬಿದ್ದಿದೆ.

ಕನ್ನಡ ಪರ ಹೋರಾಟಗಾರರಾದ ರೂಪೇಶ್​ ರಾಜಣ್ಣ ಈ ಕುರಿತು ತಮ್ಮ 'ಎಕ್ಸ್'​ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. "ಬೆಂಗಳೂರು ಬಿಟ್ಟು ಪುಣೆಗೆ ಹೋಗ್ತೀನಿ ಅಂತಿರೋ ಮಹಾನ್ ಟೆಕ್ನಾಲಜಿ ಕಂಪನಿ, EqualLife ಅಂತ. ಮಾಡೋದು ಟೀ-ಷರ್ಟ್, ಟೋಪಿ, ಕಾಫಿ ಮಗ್ಗುಗಳ ಮೇಲೆ ಪ್ರಿಂಟ್ ಮಾಡಿ ಮಾರೋದು. ಅಸಲಿಗೆ ಈ ಕಂಪನಿ ಬೆಂಗಳೂರಲ್ಲೇ ಇಲ್ಲ. ಇರುವುದು ಮುಂಬೈಯಲ್ಲಿ. ಇದೊಂದು ನಕಲಿ. ಗೆಟ್​ ಲಾಸ್ಟ್​" ಎಂದು ಬರೆದು, ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಸುಳ್ಳು ಹೇಳಿಕೊಂಡು ಜನರ ದಿಕ್ಕು ತಪ್ಪಿಸಲು ಅಡ್ಡದಾರಿ ಹಿಡಿದ ಭೂಪ, ಇದೀಗ ತನ್ನ ಅಸಲಿ ಮುಖ ಬಟಾಬಯಲಾದ ಬೆನ್ನಲ್ಲೇ ತನ್ನ ಎಕ್ಸ್​ ಖಾತೆಯನ್ನು ಬ್ಲಾಕ್​ ಮಾಡಿ, ಕನ್ನಡಿಗರ ಕೈಗೆ ಸಿಗದಂತೆ ಕಣ್ಮರೆಯಾಗಿದ್ದಾನೆ. ಈತನ ಬಗ್ಗೆ ಆಳವಾಗಿ ತಿಳಿಯದ ಕೆಲವರು, ಮೇಲ್ನೋಟಕ್ಕೆ ಮಾತ್ರ ಸೀಮಿತವಾಗಿ ದೊಡ್ಡ ಕಂಪನಿ ಒಡೆಯ, ಬೆಂಗಳೂರು ಬಿಡಲು ನಿರ್ಧರಿಸಿದ್ದಾನೆ. ಇದರಿಂದ ಐಟಿ ವಲಯಕ್ಕೆ ದೊಡ್ಡ ನಷ್ಟ ಎಂದೆಲ್ಲ ಬಿಂಬಿಸಿದ್ದರು. ಕಡೆಗೂ ಹಿಂದಿವಾಲನ ಅಸಲಿಯತ್ತು ಈಗ ಬಟಾಬಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net