

ಶಿವಮೊಗ್ಗ: ರಾಜ್ಯದಲ್ಲಿ ಬಲವಂತದ ಹಿಂದಿ ಹೇರಿಕೆ ವಿರೋಧಿಸಿ ಶಿವಮೊಗ್ಗ ಜಿಲ್ಲಾ ಜಾತ್ಯತೀತ ಜನತಾದಳದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಭಾರತ ಒಕ್ಕೂಟ ಸರ್ಕಾರದ ಕುತಂತ್ರದಿಂದ ಸೆ. 14ರ ದಿನವನ್ನು ಹಿಂದಿ ದಿವಸ್ ಆಗಿ ಆಚರಿಸಲಾಗುತ್ತಿದೆ. ಈ ಮೂಲಕ ದೇಶದ ಸಾವಿರಾರು ಪ್ರಾದೇಶಿಕ ಭಾಷೆಗಳಿಗೆ ಮೋಸ ಮಾಡಲಾಗುತ್ತಿದೆ. 400 ವರ್ಷಗಳ ಇತಿಹಾಸವಿರುವ ಹಿಂದಿಗೆ ಹಬ್ಬ ಮಾಡುವವವರಿಗೆ 2,500 ವರ್ಷ ಇತಿಹಾಸವಿರುವ ಕನ್ನಡ ಭಾಷೆ ನೆನಪಿಗೆ ಬರುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯವು ಕನ್ನಡ, ಕೊಂಕಣಿ, ತುಳು, ಕೊಡವ ಸೇರಿದಂತೆ ಹತ್ತಾರು ಭಾಷೆಗಳ ತವರೂರಾಗಿದೆ. ಅಲ್ಲದೆ, ವೈವಿಧ್ಯಮಯ ಸಂಸ್ಕೃತಿಯನ್ನೂ ಹೊಂದಿದೆ. ಇಂತಹ ಪುಣ್ಯಭೂಮಿಯಲ್ಲಿ ನಮಗೆ ಸಂಬಂಧವೇ ಇಲ್ಲದ ಭಾಷೆಯ ಆಚರಣೆ ಮಾಡಲು ಮುಂದಾಗಿರುವುದು ದುರಂತವೆಂದು ಎಂದು ಕಿಡಿಕಾರಿದರು.
ಹಿಂದಿ ದಿವಸ್ ಹಿಂದಿ ಭಾಷಿಕ ರಾಜ್ಯಗಳಿಗೆ ಸೀಮಿತವಾಗಿರಲಿ. ನಮಗೆ ಆ ಭಾಷೆಯ ಅವಶ್ಯಕತೆ ಇಲ್ಲ. ಹೊರಗಿನವರ ದಾಳಿ ಪ್ರಯತ್ನಕ್ಕೆ ಕನ್ನಡಿಗರು ಹಿಂದಿನಿಂದಲೂ ಸರಿಯಾದ ಉತ್ತರ ಕೊಡುತ್ತಾ ಬಂದಿದ್ದಾರೆ. ಈಗಲೂ ಬಲವಂತದ ಹೇರಿಕೆ ವಿರೋಧಿಸಿ ಮುಖ್ಯಮಂತ್ರಿಗಳು ಉಭಯ ಸದನಗಳಲ್ಲಿ ಖಂಡನಾ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮುಖಂಡರಾದ ನಾಗರಾಜ್ ಕಂಕಾರಿ, ಎಚ್.ಪಾಲಾಕ್ಷಿ, ನರಸಿಂಹ ಗಂಧದಮನೆ, ಡಿ.ಶ್ಯಾಮ್, ಎಸ್.ಬಿ.ಪ್ರಸನ್ನಕುಮಾರ್, ಎಸ್.ಕೆ.ಭಾಸ್ಕರ್, ಬಿ.ಎಸ್.ವಿನಯ್, ಮಂಜುನಾಥ್, ಬಸವರಾಜ್, ಧನಂಜಯ್, ತ್ಯಾಗರಾಜ್, ಗೋವಿಂದಪ್ಪ, ಸಿದ್ದಪ್ಪ, ಶಾಂತಾ ಸುರೇಂದ್ರ, ಎಸ್.ವಿ.ರಾಜಮ್ಮ, ಗೀತಾ ಸತೀಶ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.