

Congress Worker: ಮಾ.01ರ ರಾತ್ರಿ ಹರಿಯಾಣದ ರೋಹ್ಟಕ್ ಜಿಲ್ಲೆಯ ಬಸ್ ನಿಲ್ದಾಣದ ಬಳಿ ಬಿದ್ದಿದ್ದ ಸೂಟ್ಕೇಸ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಮೃತದೇಹ ಪತ್ತೆಯಾಗಿದ್ದು, ರಕ್ತಸಿಕ್ತವಾಗಿದ್ದ ಯುವತಿ ರುಂಡ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ಆಳವಾದ ನಂಟು ಹೊಂದಿದ್ದ ಯುವತಿಯನ್ನು ಯಾರೋ ಉದ್ದೇಶಪೂರ್ವಕವಾಗಿ ಕೊಲೆಗೈದು, ಮೃತದೇಹವನ್ನು ಸೂಟ್ಕೇಸ್ನಲ್ಲಿ ಇಟ್ಟಿರುವ ಶಂಕೆ ವ್ಯಕ್ತಪಡಿಸಿದ್ದ ಪೊಲೀಸರು, ಸದ್ಯ ಭೀಕರ ಹತ್ಯೆ ಹಿಂದಿರುವ ಕೈ ಯಾರದ್ದು ಎಂಬುದನ್ನು ಪತ್ತೆಹಚ್ಚಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಸದ್ಯ ಕಾಂಗ್ರೆಸ್ ಕಾರ್ಯಕರ್ತೆಯ ಬರ್ಬರ ಕೊಲೆ ಘಟನೆ ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದು, ಇಂದು (ಮಾ.03) ಬೆಳಗ್ಗೆ ಹಿಮಾನಿ ನರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಮಗಳನ್ನು ಕಳೆದುಕೊಂಡ ಹಿಮಾನಿ ಪೋಷಕರು ಮಾತನಾಡಿ, "ಪುತ್ರಿಯನ್ನು ಕೊಲೆಗೈದ ಪಾಪಿಗಳನ್ನು ಬಂಧಿಸುವವರೆಗೂ ಅವಳ ಅಂತ್ಯಕ್ರಿಯೆ ಮಾಡುವುದಿಲ್ಲ. ಪಕ್ಷದಲ್ಲಿನ ಕೆಲವು ನಾಯಕರು ನಮ್ಮ ಮಗಳು ಅಲ್ಪಾವಧಿಯಲ್ಲಿಯೇ ರಾಜಕೀಯದಲ್ಲಿ ಏಳಿಗೆ ಕಾಣುತ್ತಿದ್ದನ್ನು ಸಹಿಸುತ್ತಿರಲಿಲ್ಲ. ಈ ಕೃತ್ಯದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ, ಯಾರ ಕೈವಾಡವಿದೆ ಎಂಬುದು ನಮಗೆ ತಿಳಿಯಬೇಕು" ಎಂದು ಆರೋಪಿಸಿದ್ದಾರೆ.
"ನಾನು ಕಡೆಯ ಬಾರಿಗೆ ಅಂದರೆ ಫೆ.27ರಂದು ನನ್ನ ಮಗಳೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದೆ. ಮರುದಿನ ಪಕ್ಷದ ಕೆಲಸಗಳಲ್ಲಿ ಬಿಜಿಯಾಗಿರುವೆ ಎಂದು ಆಕೆ ಹೇಳಿದಳು. ಆದರೆ, ಅದಾದ ನಂತರ ಮಾಡಿದ ಕರೆ ತಲುಪಲಿಲ್ಲ. ಬದಲಿಗೆ ಅವಳ ಫೋನ್ ಸ್ವಿಚ್ ಆಫ್ ಆಗಿತ್ತು. ನಮಗೆ ನ್ಯಾಯ ದೊರಕುವವರೆಗೂ ನಮ್ಮ ಪುತ್ರಿಯ ಅಂತ್ಯಕ್ರಿಯೆ ಮಾಡುವುದಿಲ್ಲ. ನನ್ನ ಹಿರಿಯ ಮಗನನ್ನು ವರ್ಷಗಳ ಹಿಂದೆ ಹತ್ಯೆಗೈಯಲಾಯಿತು. ಇಂದಿಗೂ ಅವನ ಸಾವಿಗೆ ನ್ಯಾಯ ಸಿಕ್ಕಿಲ್ಲ" ಎಂದು ಹಿಮಾನಿ ತಾಯಿ ಸವಿತಾ ಅಳಲು ತೋಡಿಕೊಂಡಿದ್ದಾರೆ.
ಕಳೆದ ವರ್ಷ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಮೃತ ಹಿಮಾನಿ ನರ್ವಾಲ್ (22), ಪಕ್ಷದ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಪಕ್ಷದ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ಹಿಮಾನಿ ಉಪಸ್ಥಿತಿ ಇರುತ್ತಿತ್ತು. ಉತ್ತಮ ನಾಯಕಿ ಆಗಿ ಬೆಳೆಯುವ ನಿರೀಕ್ಷೆಯಲ್ಲಿ ಹೆಚ್ಚು ಉತ್ಸಾಹಿ ಆಗಿದ್ದ ಹಿಮಾನಿ ಹತ್ಯೆ ಬಗ್ಗೆ ಸದ್ಯ ಅನುಮಾನಗಳು ಭುಗಿಲೆದ್ದಿವೆ. ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಆಗ್ರಹಿಸಿದ್ದಾರೆ,(ಏಜೆನ್ಸೀಸ್).