

Oscars 2025: ಇಂದು (ಮಾ.03) ಬೆಳಗ್ಗೆ ಲಾಸ್ ಏಂಜಲೀಸ್ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವಾರು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಗಳ ಪಟ್ಟಿಯಲ್ಲಿ 'ದಿ ಬ್ರೂಟಲಿಸ್ಟ್' ಚಿತ್ರದ ಅದ್ಭುತ ಅಭಿನಯಕ್ಕಾಗಿ ನಟ ಆಡ್ರಿಯನ್ ಬ್ರಾಡಿ ಅವರು ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸ್ವೀಕರಿಸಿದರೆ. ಅತ್ಯುತ್ತಮ ನಟಿ ವಿಭಾಗದಲ್ಲಿ ಮೈಕಿ ಮ್ಯಾಡಿಸನ್ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾಜನರಾದರು.
ಈ ಸಾಲಿನಲ್ಲಿ ಬೆಸ್ಟ್ ಲೈವ್ ಆ್ಯಕ್ಷನ್ ಕಿರುಚಿತ್ರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಬಾಲಿವುಡ್ನ 'ಅನುಜಾ' ಚಿತ್ರ, 2025ರ ಆಸ್ಕರ್ ಪ್ರಶಸ್ತಿಯನ್ನು ಕಡೆಗೂ ಕಳೆದುಕೊಂಡಿತು. ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅನಿತಾ ಭಾಟಿಯಾ ನಿರ್ಮಾಣದಲ್ಲಿ ಮೂಡಿಬಂದ ಅನುಜಾ, 'ಐ ಆಮ್ ನಾಟ್ ಎ ರೋಬೋಟ್' ಸಿನಿಮಾ ವಿರುದ್ಧ ಸೋಲು ಕಂಡಿತು. 'ಎ ಲಿಯನ್', 'ಐ ಆಮ್ ನಾಟ್ ಎ ರೋಬೋಟ್', 'ದಿ ಲಾಸ್ಟ್ ರೇಂಜರ್' ಮತ್ತು 'ದಿ ಮ್ಯಾನ್ ಹೂ ಕುಡ್ ನಾಟ್ ರಿಮೇನ್ ಸೈಲೆಂಟ್' ಜತೆಗೆ ಸ್ಪರ್ಧಿಸಿದ ಹಿಂದಿ ಚಿತ್ರ ಆಸ್ಕರ್ ಪಡೆಯುವಲ್ಲಿ ವಿಫಲಗೊಂಡಿದ್ದು, ಸದ್ಯ ಭಾರತೀಯರಲ್ಲಿ ಬೇಸರ ಮೂಡಿಸಿದೆ.
ಆಡಮ್ ಜೆ. ಗ್ರೇವ್ಸ್ ನಿರ್ದೇಶಿಸಿದ 'ಅನುಜಾ' ಚಿತ್ರ, ಓರ್ವ ಬಡ ಯುವತಿಯ ಕಥೆಯನ್ನು ಹೊತ್ತು ಸಾಗಿದೆ. ದೆಹಲಿಯ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಹುಡುಗಿ ಪಾತ್ರದಲ್ಲಿ ನಟಿ ಸಜ್ದಾ ಪಠಾಣ್ ಅಭಿನಯಿಸಿದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತ ಒಬ್ಬ ಹೆಣ್ಣುಮಗಳ ಜೀವನ ಎಷ್ಟು ಕಠಿಣ, ಸವಾಲಿನ ಹಾದಿ ಹೇಗಿರುತ್ತದೆ ಎಂಬುದನ್ನು ಅನುಜಾ ಮೂಲಕ ಪ್ರೇಕ್ಷಕರಿಗೆ ಕಟ್ಟುಕೊಡಲಾಗಿದೆ.
ಚಿತ್ರಕ್ಕೆ ಸುಚಿತ್ರ ಮಟ್ಟೈ, ಮಿಂಡಿ ಕಾಲಿಂಗ್, ಗುಣೀತ್ ಮೊಂಗಾ ಕಪೂರ್, ಕೃಶನ್ ನಾಯಕ್, ಆರನ್ ಕೊಪ್, ದೇವಾನಂದ ಗ್ರೇವ್ಸ್, ಮೈಕೆಲ್ ಗ್ರೇವ್ಸ್, ಕ್ಷೀತಿಜ್ ಸೈನಿ ಮತ್ತು ಅಲೆಕ್ಸಾಂಡ್ರಾ ಬ್ಲೇನಿ ಜಂಟಿಯಾಗಿ ಬೆಂಬಲ ನೀಡಿರುವುದು ವಿಶೇಷ,(ಏಜೆನ್ಸೀಸ್).