

ಧರ್ಮಶಾಲಾ: ಹಿಮಾಚಲ ಪ್ರದೇಶದ ಸರ್ಕಾರವು ಈಗ ಜನರ ಮೇಲೆ ಶೌಚಗೃಹ ತೆರಿಗೆ(Toilet Tax)ಯನ್ನು ಹೇರಲಿದೆ. ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ರಾಜ್ಯದ ಆದಾಯ ಹೆಚ್ಚಿಸಲು ರಾಜ್ಯದ ಸರ್ಕಾರ ಈ ಸೂತ್ರ ಹೊರತಂದಿದೆ. ಎನ್ನಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸುಖವಿಂದರ್ ಸಿಂಗ್ ಸುಖು ಅಂತಹ ಯಾವುದೇ ಆದೇಶ ಹೊರಡಿಸಿಲ್ಲ ಮತ್ತು ನೀರಿನ ಶುಲ್ಕಕ್ಕೆ ಸಂಬಂಧಿಸಿದ ಅಧಿಸೂಚನೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಪ್ರತಿ ನೀರಿನ ಸಂಪರ್ಕಕ್ಕೆ ಕೇವಲ 100 ರೂಪಾಯಿಗಳನ್ನು ವಿಧಿಸುತ್ತಿದ್ದೇವೆ. ಹಿಮಾಚಲದಲ್ಲಿ ಶೌಚಗೃಹದ ತೆರಿಗೆಯಂತಹ ಯಾವುದೇ ವಿಷಯವಿಲ್ಲ. ಇದು ಆಧಾರರಹಿತವಾಗಿದೆ. ಪ್ರಸ್ತುತ ಅಂತಹ ಯಾವುದೇ ಅಧಿಸೂಚನೆಯನ್ನು ಹೊರಡಿಸಲಾಗಿಲ್ಲ ಎಂದು ಹೇಳಿದರು.
ಹಿಮಾಚಲ ಪ್ರದೇಶದ ಜಲ ಶಕ್ತಿ ಇಲಾಖೆ ಇತ್ತೀಚೆಗೆ ರಾಜ್ಯದ ನಗರ ಪ್ರದೇಶಗಳಲ್ಲಿನ ಪ್ರತಿ ಮನೆಯಿಂದ ಒಳಚರಂಡಿ ತೆರಿಗೆಯನ್ನು ಸಂಗ್ರಹಿಸಲು ನಿರ್ಧರಿಸಿದೆ . ಜಲಶಕ್ತಿ ಇಲಾಖೆಯು ಮನೆಗಳಲ್ಲಿ ಅಳವಡಿಸಲಾಗಿರುವ ಪ್ರತಿ ಶೌಚಗೃಹದ ಮೇಲೆ ತಿಂಗಳಿಗೆ ₹ 25 ತೆರಿಗೆಯನ್ನು ವಿಧಿಸುತ್ತದೆ. ಅಂದರೆ ಒಂದು ಮನೆಯಲ್ಲಿ ಹೆಚ್ಚು ಶೌಚಗೃಹವನ್ನು ನಿರ್ಮಿಸಿದರೆ, ಅವುಗಳಿಂದ ಹೆಚ್ಚು ತೆರಿಗೆ ಸಂಗ್ರಹಿಸಲಾಗುತ್ತದೆ ಎಂದು ವರದಿ ಮಾಡಲಾಗಿತ್ತು.
ಈ ಅಧಿಸೂಚನೆಯನ್ನು ಸೆಪ್ಟೆಂಬರ್ 21 ರಂದು ಹೊರಡಿಸಲಾಗಿದೆ. ಒಳಚರಂಡಿ ಶುಲ್ಕಕ್ಕೆ ಸಂಬಂಧಿಸಿದಂತೆ ಹೊರಡಿಸಲಾದ ಅಧಿಸೂಚನೆಯನ್ನು ಅದೇ ದಿನ ಹಿಂಪಡೆಯಲಾಗಿದೆ. ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ನೀರಿನ ಬಿಲ್ ನೀಡಿರಲಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಉಚಿತ ನೀರು ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಹಿಮಾಚಲ ಪ್ರದೇಶದ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಪ್ರತಿ ತಿಂಗಳೂ ಪ್ರತಿ ಸಂಪರ್ಕಕ್ಕೆ 100 ರೂಪಾಯಿ ನೀರಿನ ಬಿಲ್ ನೀಡಲು ಆದೇಶಿಸಿದೆ ಎಂದು ಹೇಳಲಾಗುತ್ತಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದ ಶೌಚಗೃಹದ ತೆರಿಗೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರು.