VIDEO| ಸ್ಕೂಟರ್​ ಸಮೇತ ದೇವಸ್ಥಾನ ಒಳಗೆ ಬಿದ್ದ ಯುವತಿ ವಿಡಿಯೋ ವೈರಲ್​: ಇದು ನಡೆದಿದ್ದು ಎಲ್ಲಿ ಗೊತ್ತಾ?

Girl Scooty
Published on

ಪುಣೆ: ಮಹಾರಾಷ್ಟ್ರದ ವಾಕಡ್​ ನಗರದಲ್ಲಿ ನಡೆದಿರುವ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಬಹುತೇಕ ಜನರು ಸಮಯ ಉಳಿಸಲೋ ಅಥವಾ ಆತುರದಿಂದಲೋ ದೇವಸ್ಥಾನದ ಹೊರಭಾಗದಲ್ಲೇ ನಿಂತು ಕೈಮುಗಿದು ಮುಂದೆ ತೆರಳುವುದನ್ನು ನೋಡಿದ್ದೀರಾ, ಅಂಥವರು ಈ ವಿಡಿಯೋ ನೋಡಿದ್ರೆ ಶಾಕ್​ ಆಗೋದು ಖಂಡಿತ.

ಸ್ಕೂಟಿ ಮೇಲೆ ಕುಳಿತ ಯುವತಿಯೊಬ್ಬಳು ಸ್ಕೂಟರ್​ ಸಮೇತವಾಗಿ ಇದ್ದಕ್ಕಿದಂತೆ ಶಿವನ ದೇವಸ್ಥಾನ ಒಳಗೆ ಹೋಗಿ ಬೀಳುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು, ಇದೀಗ ಎಲ್ಲೆಡೆ ಸುದ್ದಿಯಾಗಿದೆ.

ವಿಡಿಯೋದಲ್ಲಿ ಏನಿದೆ?: ದೇವಸ್ಥಾನ ದ್ವಾರದ ಮುಂಭಾಗದಲ್ಲಿ ಸ್ಕೂಟರ್​ ಮೇಲೆ ಕುಳಿತ ಯುವತಿ, ದೇವರಿಗೆ ಕೈಮುಗಿದ ಬಳಿಕ ಮುಖಕ್ಕೆ ಬಟ್ಟೆಕೊಂಡು ಹೊರಡಲು ತಯಾರಾಗುತ್ತಾಳೆ. ಈ ವೇಳೆ ಸ್ಕೂಟರ್​ ಸ್ಟಾರ್ಟ್​ ಮಾಡಿ ಕ್ಲಚ್​ ಹಿಡಿದು ಹೊರಡಬೇಕು ಎನ್ನುವಷ್ಟರಲ್ಲಿ ನಿಯಂತ್ರಣ ಕಳೆದುಕೊಂಡೋ ಅಥವಾ ಜಾದುವಿನಿಂದಲೋ ಸ್ಕೂಟರ್​ ಸಮೇತವಾಗಿ ಶಿವನ ದೇವಸ್ಥಾನದ ಒಳಗೆ ಹೋಗಿ ಬೀಳುತ್ತಾಳೆ. ಕೆಳಗೆ ಬಿದ್ದ ಸ್ಕೂಟರ್​ ದೇವಸ್ಥಾನದ ಒಳಗಿನ ನಂದಿ ವಿಗ್ರಹಕ್ಕೆ ಡಿಕ್ಕಿ ಹೊಡೆದು ನಿಲ್ಲುತ್ತದೆ. ಯುವತಿ ದೇವರಿಗೆ ಅಡ್ಡ ಬೀಳುವ ರೀತಿ ಕೆಳಗೆ ಬೀಳುತ್ತಾಳೆ. ಘಟನೆ ನೋಡಿ ಸ್ಥಳೀಯ ಮಹಿಳೆ ಯುವತಿಯ ನೆರವಿಗೆ ಧಾವಿಸುತ್ತಾಳೆ. ಆದರೆ, ಯುವತಿಯೇ ಸ್ಕೂಟರ್​ ಅನ್ನು ತೆಗೆದುಕೊಂಡು ದೇವಸ್ಥಾನದಿಂದ ಹೊರಡುತ್ತಾಳೆ.

ಇನ್ನೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಇದನ್ನು ಕಂಡ ನೆಟ್ಟಿಗರು ದೇವಸ್ಥಾನ ಹೊರಗಿನಿಂದಲೇ ನಮಿಸಿ ಹೋಗುವವರನ್ನು ದೇವರು ಇದೇ ರೀತಿ ಕರೆಸಿಕೊಳ್ಳುತ್ತಾನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net