

ಮಿರ್ಜಾಪುರ (ಉತ್ತರ ಪ್ರದೇಶ): ನಿನ್ನೆಯಿಂದ ಎಲ್ಲೆಲ್ಲೂ ಒಂದೇ ಸುದ್ದಿ. ಅದು ಮದ್ಯ ಪ್ರೇಮಿಗಳದ್ದು. ಬಾರ್ಗಳ ಮುಂದೆ ಕಿಲೋಮೀಟರ್ ಗಟ್ಟಲೆ ಸಾಲು ನಿಂತು ಮದ್ಯಕ್ಕಾಗಿ ಹಪಹಪಿಸುತ್ತಿದ್ದ ಸಹಸ್ರಾರು ಮಂದಿಯದ್ದೇ ಎಲ್ಲೆಲ್ಲೂ ಸದ್ದು.
ಒಂದೂವರೆ ತಿಂಗಳಿನಿಂದ ಮದ್ಯದ ಕನಸು ಕಾಣುತ್ತಿದ್ದ ಈ ಪ್ರೇಮಿಗಳ ಪೈಕಿ ನಿನ್ನೆ ಹಲವರು ಮಾಡಿರುವ ಆವಾಂತರಗಳು ಅಷ್ಟಿಷ್ಟಲ್ಲ. ಅದೇ ಮತ್ತೊಂದೆಡೆ, ಜೀವನದಲ್ಲಿ ಎಂದೂ ತೋರಿಸದಷ್ಟು ಸಹನೆಯಿಂದ ದಿನಗಟ್ಟಲೆ ಕಾದವರೂ ಇದ್ದಾರೆ. ಯುವತಿಯರು, ಮಹಿಳೆಯರೂ ಕೆಲವು ಬಾರ್ಗಳ ಮುಂದೆ ಕಾಣಿಸಿಕೊಂಡಿರುವುದು ಕೂಡ ಭಾರಿ ಸುದ್ದಿಯಾಗಿದೆ.
ಇದನ್ನೂ ಓದಿ: ಬಾರ್ಗಳ ಮುಂದೆ ಮಹಿಳೆಯರದ್ದೂ ಕಾರುಬಾರು!
ಇಂದು ಒಂದೆಡೆಯಾದರೆ, ಇನ್ನೊಂದೆಡೆ ಮದ್ಯದಂಗಡಿಯನ್ನು ತೆರೆಯಲಾಗದೇ ಭಾರಿ ಲಾಸ್ನಲ್ಲಿದ್ದ ಮದ್ಯದಂಗಡಿ ಮಾಲೀಕರಿಗಂತೂ ಈಗ ಹಬ್ಬದ ದಿನಗಳು. ಆದರೆ ತಿಂಗಳಾನುಗಟ್ಟಲೆ ಮದ್ಯದ ಮುಖ ಕಾಣದೇ ಕಂಗಾಲಾಗಿದ್ದ ಮದ್ಯವ್ಯಸನಿಗಳ ಆತುರ ಸ್ವಭಾವವನ್ನು ಬಲ್ಲ ಮಾಲೀಕರಿಗೆ ನೂಕುನುಗ್ಗಲಾಗದಂತೆ ಎಚ್ಚರಿಕೆ ವಹಿಸುವುದು ಬಹು ದೊಡ್ಡ ಸವಾಲಾಗಿತ್ತು.
ಲಾಕ್ಡೌನ್ ನಿಯಮ ಪಾಲನೆ ಮಾಡದಿದ್ದರೆ ಪೊಲೀಸರು ಅಂಗಡಿ ಬಂದ್ ಮಾಡಿಸುವ ಭಯವೂ ಇದ್ದುದರಿಂದ ತಮ್ಮ ಗ್ರಾಹಕರನ್ನು ಸರಿಯಾಗಿ ಇಟ್ಟುಕೊಳ್ಳುವುದು ಅವರಿಗೆ ಚಿಂತೆಯೇ ಆಗಿತ್ತು.
ಆದ್ದರಿಂದ ಗ್ರಾಹಕರನ್ನು ಸೆಳೆದು ಇಟ್ಟುಕೊಳ್ಳುವ ಸಂಬಂಧ ಮಾಲೀಕರು ಕೆಲವೊಂದು ಟೆಕ್ನಿಕ್ ಬಳಸುತ್ತಿದ್ದರು. ಈ ಪೈಕಿ ಉತ್ತರ ಪ್ರದೇಶದ ಮಿರ್ಜಾಪುರದ ಬಾರ್ನ ಮಾಲೀಕ ಬಳಸಿದ ತಂತ್ರಗಾರಿಕೆ ಭಾರಿ ಸುದ್ದಿ ಮಾಡಿದ್ದು, ಇದರ ವೀಡಿಯೋ ವೈರಲ್ ಆಗಿದೆ.
ಅದೇನೆಂದರೆ ಹಲವಾರು ಗಂಟೆಗಳವರೆಗೆ ಬಿಸಿಲನ್ನೂ ಎಣಿಸದೇ ಕಿಲೋಮೀಟರ್ಗಟ್ಟಲೆ ನಿಂತಿದ್ದ ಮದ್ಯಪ್ರೇಮಿಗಳ ಸಹನೆ ಕಂಡ ಮಾಲೀಕ ತಮ್ಮ ಗ್ರಾಹಕರ ಮೇಲೆ ಹೂವಿನ ಪಕಳೆಯನ್ನು ಹಾಕುವ ಮೂಲಕ ಸ್ವಾಗತಿಸಿದ್ದಾನೆ.
ಇದನ್ನೂ ಓದಿ: ಕ್ವಾರಂಟೈನ್ನಲ್ಲೇ ದಾಖಲೆ ಬರೆದುಬಿಟ್ಟ ಈ ಯುವಕ!
ಈ ಗ್ರಾಹಕರಿಂದಲೇ ನಮಗೆ ಲಾಭವಾಗುತ್ತದೆ. ಇವರೆಲ್ಲಾ ತುಂಬಾ ಸಹನೆಯಿಂದ ವರ್ತಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡಬೇಕಿದ್ದ ಹಿನ್ನೆಲೆಯಲ್ಲಿ, ಸಾಲು ತುಂಬಾ ಉದ್ದವಾಗಿತ್ತು. ಆದ್ದರಿಂದ ಇವರನ್ನು ಖುಷಿಪಡಿಸಲು ಇವರಿಗೆ ಪುಷ್ಪನಮನ ಸಲ್ಲಿಸಿದ್ದೇನೆ ಎಂದು ಬಾರ್ ಮಾಲೀಕ ಹೇಳಿದ್ದಾನೆ. (ಏಜೆನ್ಸಿಸ್)