ಕ್ವಾರಂಟೈನ್​ನಲ್ಲೇ ದಾಖಲೆ ಬರೆದುಬಿಟ್ಟ ಈ ಯುವಕ!

quarantine youth2
Published on

ನವದೆಹಲಿ: ಕ್ವಾರಂಟೈನ್​ ಶಬ್ದ ಕೇಳಿದರೆ ಬಹುತೇಕ ಮಂದಿ ಭಯಭೀತರಾಗುತ್ತಾರೆ. ಕರೊನಾ ಸೋಂಕಿನ ಭೀತಿ ಇರುವ ಹಿನ್ನೆಲೆಯಲ್ಲಿ ಶಂಕಿತರನ್ನೆಲ್ಲ ಕ್ವಾರಂಟೈನ್​ನಲ್ಲಿ ಇಡಲಾಗುತ್ತಿದೆ. ಕನಿಷ್ಠ 14 ದಿನಗಳು ಯಾರ ಸಂಪರ್ಕಕ್ಕೂ ಬಾರದೇ ಒಂಟಿಯಾಗಿ ಇರಬೇಕು ಎಂಬ ನಿಯಮ ಆರಂಭದಲ್ಲಿ ಮಾಡಿ, ನಂತರ ಈ ಅವಧಿಯನ್ನು ಹೆಚ್ಚಿಗೆ ಕೂಡ ಮಾಡಲಾಗಿತ್ತು.

ಒಮ್ಮೆ ಕ್ವಾರಂಟೈನ್​ ಮುಗಿಸಿ ಬರುವವರೆಗೆ ಸಾಕಪ್ಪಾ ಸಾಕು ಎಂದುಕೊಳ್ಳುವವರೇ ಎಲ್ಲಾ. ಆದರೆ ಇಲ್ಲೊಬ್ಬ ಯುವಕನ ಗ್ರಹಚಾರ ಹೇಗಿತ್ತೆಂದರೆ ಒಂದಲ್ಲ, ಎರಡಲ್ಲ, ನಾಲ್ಕು ಬಾರಿ ಕ್ವಾರಂಟೈನ್​ ಅನುಭವಿಸಬೇಕಾಗಿ ಬಂದಿದೆ!

ಈ ಯುವಕ ಉತ್ತರಾಖಂಡದ ಖಾಟೋಲಿಯದ ಪ್ರವೀಣ್​ ಬುರಾಠಿ. ಇರಾನ್​ನ ರಾಜಧಾನಿ ಟೆಹರಾನ್‌ನಲ್ಲಿ ಸಮುದ್ರಯಾನ ಕಂಪನಿಯೊಂದರ ಉದ್ಯೋಗಿ ಈತ. ಕಳೆದ ತಿಂಗಳು ರಜೆ ಪಡೆದು ತನ್ನ ತವರೂರು ಖಾಟೋಲಿಗೆ ಮರಳುತ್ತಲಿದ್ದ.

ಅದು ಫೆಬ್ರುವರಿ 28. ಈತ ವಾಪಸ್​ ಬರುತ್ತಿದ್ದಂತೆಯೇ ಇರಾನ್​ನಲ್ಲಿ ಲಾಕ್‌ಡೌನ್‌ ಘೋಷಿಸಲಾಯಿತು. ಭಾರತಕ್ಕೆ ಮರಳುವ ಸಲುವಾಗಿ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿದ. ‘14 ದಿನ ಕ್ವಾರಂಟೈನ್‌ಗೆ ಒಳಪಟ್ಟು, ಮುಂದಿನ ವಿಮಾನ ವ್ಯವಸ್ಥೆಯಾದಾಗ ಭಾರತಕ್ಕೆ ಹೋಗಬಹುದು ಎಂಬ ಸೂಚನೆ ಸಿಕ್ಕಿತು.

ಅಲ್ಲಿಂದ ಶುರುವಾಯ್ತು ಮೊದಲ ಕ್ವಾರಂಟೈನ್​. ಹೀಗೆ ಅಲ್ಲೇ 14 ದಿನಗಳ ಕ್ವಾರೆಂಟೈನ್ ಮುಗಿಸಿದ ಪ್ರವೀಣ, ಮಾ.16ರಂದು ಇತರ 195 ಭಾರತೀಯ ಪ್ರಜೆಗಳ ಜತೆ ದೆಹಲಿಗೆ ಬಂದ. ವಿದೇಶದಿಂದ ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕ್ವಾರಂಟೈನ್​ ಮಾಡಲಾಯಿತು! ಇನ್ನೇನು ಕ್ವಾರಂಟೈನ್​ ಅವಧಿ ಮುಗಿದು ಮನೆಗೆ ತಲುಪಬಹುದು ಎಂದು ಕನಸು ಕಾಣುತ್ತಿದ್ದ ಪ್ರವೀಣ್​ಗೆ ಮತ್ತೆ ಆಘಾತವಾಯಿತು. ಮಾ.31ಕ್ಕೆ ಮರು ರಕ್ತ ಪರೀಕ್ಷೆ ನಡೆಸಿದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಪುನಃ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಯಿತು!

ಮೂರನೆ ಕ್ವಾರಂಟೈನ್​ ಅವಧಿ ಮುಗಿದ ಮೇಲೆ ಮನೆಗೆ ಹೋಗಲು ಅನುಮತಿ ಸಿಕ್ಕಿತು. ಅಬ್ಬಾ ಇನ್ನಾದರೂ ಮನೆ ಸೇರಿಬಹುದು ಎಂದುಕೊಂಡ ಪ್ರವೀಣ್​. ಆದರೆ ಗ್ರಹಚಾರಕ್ಕೆ ಅವನ ಊರಿಗೆ ಹೋದಾಗ, ಪರ ಊರಿನಿಂದ ಬಂದ ಹಿನ್ನೆಲೆಯಲ್ಲಿ ಮತ್ತೆ ಕ್ವಾರಂಟೈನ್​ನಲ್ಲಿ ಇಡಲಾಯಿತು!

ಅಂತೂ ಎರಡು ತಿಂಗಳು ಒಂದರ ಮೇಲೊಂದರಂತೆ ನಾಲ್ಕು ಬಾರಿ ಕ್ವಾರಂಟೈನ್​ ಮುಗಿಸಿ ಮನೆಯನ್ನು ಸೇರಿದ ಪ್ರವೀಣ. ಈಗ ತನ್ನ ರಜೆಯ ಅವಧಿಯೂ ಮುಗಿಯುತ್ತಲಿದ್ದು, ಲಾಕ್​ಡೌನ್​ ಮುಗಿದ ಮೇಲೆ ಪುನಃ ವಾಪಸಾಗಬೇಕು ಎಂಬ ಬೇಸರ ಈ ಯುವಕನಿಗೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net