

ಕೊಪ್ಪ: ಮಕ್ಕಳಲ್ಲಿ ಚೈತನ್ಯ ತುಂಬಲು ಕ್ರೀಡೆ ಸಹಕಾರಿ. ಪಾಲಕರು, ಶಿಕ್ಷಕರು ಮಕ್ಕಳನ್ನು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಲು ಮುಂದಾಗಬೇಕು ಎಂದು ಅಮ್ಮ ೌಂಡೇಷನ್ ಸಂಸ್ಥಾಪಕ ಸುಧಾಕರ್ ಎಸ್. ಶೆಟ್ಟಿ ಹೇಳಿದರು.
ಇಲ್ಲಿನ ಶಾರದಾ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಮಕ್ಕಳು ತೊಡಗಿಸಿಕೊಳ್ಳಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಆದರೆ ಗ್ರಾಮೀಣ ಮಕ್ಕಳಿಗೆ ಇದರ ಸೌಲಭ್ಯ ತಲುಪುತ್ತಿಲ್ಲ. ಮುಂದಿನ ದಿನದಲ್ಲಿ ಗ್ರಾಮೀಣ ಭಾಗದ ಹಾಗೂ ನನ್ನ ಕ್ಷೇತ್ರದ ಮಕ್ಕಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು.
ಮೈದಾನಗಳಲ್ಲಿ ಮಕ್ಕಳು ಆಟವಾಡುವುದು ಕಡಿಮೆಯಾಗಿದೆ. ಮೊಬೈಲ್ ಬಳಕೆ ಹೆಚ್ಚಾಗಿದೆ. ಮಕ್ಕಳು ಮೊಬೈಲ್ ಬಳಸುವುದರಿಂದ ಅವರ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಪಾಲಕರು ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಬೇಕು ಎಂದು ತಿಳಿಸಿದರು.
ಡಾ. ಉದಯ್‌ಶಂಕರ್ ಮಾತನಾಡಿ, ನಮ್ಮ ದೇಶದ ಜನಸಂಖ್ಯೆ 140 ಕೋಟಿ ಇದ್ದರೂ ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಪದಕಗಳನ್ನು ಪಡೆಯಲು ಸಾಧ್ಯವಾಗಲ್ಲ. ನಮ್ಮ ಕ್ರೀಡಾಪಟುಗಳಿಗೆ ಹೆಚ್ಚಿನ ತರಬೇತಿ ನೀಡಬೇಕು ಎಂದರು.
ಶಾರದಾ ಟ್ರಸ್ಟ್ ಅಧ್ಯಕ್ಷ ಎಚ್.ಎಸ್.ಕಳಸಪ್ಪ ಮಾತನಾಡಿ, ಕ್ರೀಡಾಕೂಟಗಳಲ್ಲಿ ಸೋಲು-ಗೆಲುವುಗಿಂತ ಭಾಗವಹಿಸುವುದು ಮುಖ್ಯ. ಕ್ರೀಡಾಕೂಟವನ್ನು ಆಯೋಜಿಸುವುದು ಸವಾಲಿನ ಕೆಲಸ. ದಾನಿಗಳ ಸಹಕಾರದಿಂದ ಆಯೋಜನೆಗೊಳ್ಳುತ್ತಿದೆ ಎಂದು ತಿಳಿಸಿದರು.
ಶಾರದಾ ವಿದ್ಯಾಮಂದಿರ ಮುಖ್ಯ ಶಿಕ್ಷಕಿ ಸರಸ್ವತಿ, ಕೆಡಿಪಿ ಸದಸ್ಯರಾದ ನಾರ್ವೆ ಅಶೋಕ್, ರಾಜಾಶಂಕರ್, ಮಹಾಬಲೇಶ್, ಹರಂದೂರು ಗ್ರಾಪಂ ಅಧ್ಯಕ್ಷ ಸುರೇಶ್ ಇತರರಿದ್ದರು.