ಆತ್ಮಹತ್ಯೆಗೆ ಪ್ರಚೋದನೆ, ಶಿಕ್ಷೆ ರದ್ಧತಿಗೆ ‘ಹೈ ’ನಕಾರ

highcourt
Published on

ಬೆಂಗಳೂರು: ಅವಿವಾಹಿತೆ ಗರ್ಭ ಧರಿಸಲು ಕಾರಣನಾಗಿ ಮದುವೆಯಿಂದ ತಪ್ಪಿಸಿಕೊಳ್ಳಲು ಆಕೆಗೆ ವಿಷಕಾರಿ ಮಾತ್ರೆ ನೀಡಿ, ಸಾವಿಗೆ ಕಾರಣನಾದ ಆರೋಪಿ ವಿರುದ್ಧ ಶಿಕ್ಷೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಐದು ವರ್ಷಗಳ ಶಿಕ್ಷೆ ಮತ್ತು ದಂಡವನ್ನು ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಬಿದಲಾಪುರದ ಮುರಳಿ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಮೇಲ್ಮನವಿದಾರರ ಪರ ವಕೀಲರು, ಸಂತ್ರಸ್ತೆ ಪ್ರಜ್ಞೆತಪ್ಪಿ ಬೀಳುವವರೆಗೂ ಮೇಲ್ಮನವಿದಾರರ ವಿರುದ್ಧ ಅನುಮಾನ ಮೂಡಿರಲಿಲ್ಲ. ವೈದ್ಯಕೀಯ ದಾಖಲೆಗಳಲ್ಲಿ ಪ್ರಜ್ಞೆತಪ್ಪಿ ಮತ್ತೆ ಪ್ರಜ್ಞೆ ಬಂದಿದೆ ಎಂಬುದಾಗಿ ಹೇಳಿಲ್ಲ. ಆದರೆ, ಸಂತ್ರಸ್ತೆಯ ಪ್ರಜ್ಞೆ ತಪ್ಪಿಸುವುದಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಮೇಲ್ಮನವಿದಾರರ ವಿರುದ್ಧ ನೀಡಿರುವ ಹೇಳಿಕೆಗಳು ವೈದ್ಯಕೀಯ ದಾಖಲೆಗಳಲ್ಲಿ ವಿವರಿಸಿಲ್ಲ. ಜತೆಗೆ, ಸಂತ್ರಸ್ತೆ ಆರು ತಿಂಗಳ ಗರ್ಭಿಣಿ ಎಂಬುದಕ್ಕೂ ಸಾಕ್ಷ್ಯಾಧಾರಗಳಿಲ್ಲ. ಆದರೆ, ಅಲ್ಯೂಮಿನಿಯಂ ಪಾಸ್ಪೇಟ್ ಸೇವನೆಯಿಂದ ಉಸಿರಾಟದ ಸಮಸ್ಯೆಯಾಗಿ ಮೃತರಾಗಿರುವುದಾಗಿ ತಿಳಿಸಲಾಗಿದೆ.

ಅಲ್ಲದೆ, ಸಂತ್ರಸ್ತೆ ಗರ್ಭಿಣಿಯಾಗಲು ಮೇಲ್ಮನವಿದಾರರೇ ಕಾರಣ ಎಂಬುದಕ್ಕೆ ಡಿಎನ್‌ಎ ಸಾಕ್ಷ್ಯಗಳಿಲ್ಲ. ಈ ಸಂಬಂಧ ಸಂತ್ರಸ್ತೆ ಗರ್ಭಾವತಿಯಾಗುವವರೆಗೂ ದೂರು ನೀಡಿಲ್ಲ. ಆದರೆ, ಇಡೀ ಪ್ರಕರಣದಲ್ಲಿ ಸಂತ್ರಸ್ತೆ ಮೃತರಾದ ಬಳಿಕ ಆರೋಪ ಮಾಡಲಾಗಿದ್ದು, ಅರ್ಜಿದಾರ ಯಾವುದೇ ಹೇಳಿಕೆ ನೀಡದೆಯೂ ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಶಿಕ್ಷೆ ವಿಧಿಸಿಸಲಾಗಿದೆ. ಆದ್ದರಿಂದ ಅರ್ಜಿದಾರರಿಗೆ ವಿಧಿಸಿರುವ ಶಿಕ್ಷೆ ರದ್ದುಗೊಳಿಸಬೇಕು ಎಂದು ಕೋರಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ಮೇಲ್ಮನವಿದಾರರ ಸಂತ್ರಸ್ತೆ ಮನೆಗೆ ಹೋಗಿ ಬಂದಿರುವುದು, ಸಂತ್ರಸ್ತೆ ಮರಣಪೂರ್ವ ಹೇಳಿಕೆಯಲ್ಲಿ ತಾನು ಗರ್ಭಧರಿಸಲು ಅಪರಾಧಿ ಅಥವಾ ಮೇಲ್ಮನವಿದಾರ ಕಾರಣ ಎಂದು ತಿಳಿಸಿದ್ದಾರೆ. ಇದೇ ಕಾರಣದಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಅಂಶ ಸತ್ಯವಾಗಿದ್ದು, ಮೇಲ್ಮನವಿ ರದ್ದುಪಡಿಸಬೇಕು ಎಂದು ನ್ಯಾಯಪೀಠಕ್ಕೆ ಕೋರಿದರು.

ಅಪರಾಧಿಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯ ಆದೇಶದಲ್ಲಿ ಯಾವುದೇ ದೋಷಗಳಿಲ್ಲ. ಹೀಗಾಗಿ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net