

ಬೆಂಗಳೂರು: ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಪಾದಚಾರಿ ಮಾರ್ಗಗಳಲ್ಲಿ ಅಡೆತಡೆ ಇಲ್ಲದೆ ಮತ್ತು ಸುರಕ್ಷಿತವಾಗಿ ನಡೆದಾಡಲು ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ನಗರದ ಅರಕೆರೆ ಮೈಕೋ ಲೇಔಟ್ ನಿವಾಸಿ ದೇವರಾಯ ಸಮುದ್ರಂ ವೆಂಕಟೇಶ ವಿಜಯಕುಮಾರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ್‌ರಾವ್ ಹಾಗೂ ನ್ಯಾ. ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರ, ನಗರಾಭಿವೃದ್ಧಿ ಇಲಾಖೆಯ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತರು, ಬಿಬಿಎಂಪಿ ಮುಖ್ಯ ಆಯುಕ್ತರು, ಅಂಗವಿಕಲರ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆಯನ್ನು ಸೆಪ್ಟಂಬರ್ 24ಕ್ಕೆ ಮುಂದೂಡಿತು.
ನಗರ ಭೂ ಸಾರಿಗೆ ನಿರ್ದೇಶಕರು 2014ರಲ್ಲಿ ಹೊರಡಿಸಿರುವ ಪಾದಚಾರಿ ಮೂಲಸೌಕರ್ಯ ಯೋಜನೆ ಮತ್ತು ಅನುಷ್ಠಾನ ಮಾರ್ಗಸೂಚಿಗಳು ಹಾಗೂ 2016ರಲ್ಲಿ ಹೊರಡಿಸಲಾದ ಪರಿಷ್ಕೃತ ಮಾರ್ಗಸೂಚಿಗಳನ್ನು ಆನುಷ್ಠಾನಕ್ಕೆ ತರುವಂತೆ, ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಅಡಚಣೆ ರಹಿತ, ಸುರಕ್ಷಿತ ಪಾದಚಾರಿ ಮಾರ್ಗ, ರಸ್ತೆ, ಸಾರಿಗೆ ಸೌಲಭ್ಯಗಳನ್ನು ಆದ್ಯತೆಯ ಮೇಲೆ ಒದಗಿಸಲು, ಈ ಸಂಬಂಧ ನ್ಯಾಯಾಲಯ ನೀಡುವ ಆದೇಶಗಳನ್ನು ಜಾರಿಗೆ ತರಲು ವಿಶೇಷಾಧಿಕಾರ ಸಮಿತಿ ರಚಿಸುವಂತೆ, ಅಂಗವಿಕಲ ಸ್ನೇಹಿ ಮೂಲಸೌಕರ್ಯಗಳನ್ನು ಒದಗಿಸಿ ಅದರ ನಿರ್ವಹಣೆ ಮಾಡಲು ವಾರ್ಡ್ ಮಟ್ಟದಿಂದ ಪಾಲಿಕೆ ಆಯುಕ್ತ ಮಟ್ಟದವರಿಗೆ ಆಡಳಿತ ವ್ಯವಸ್ಥೆ ರೂಪಿಸುವಂತೆ ರಾಜ್ಯ ಸರ್ಕಾರ, ಪಾಲಿಕೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.