

ಬೆಂಗಳೂರು: ರಾಷ್ಟ್ರ ಮಟ್ಟದಲ್ಲಿ ಮಾದಕ ವಸ್ತುಗಳನ್ನು ತೊಡೆದು ಹಾಕುವ ಉದ್ದೇಶಕ್ಕಾಗಿ ವಿಧಾನಸೌಧದಲ್ಲಿ ಕೇಂದ್ರ ಗೃಹ ಸಚಿವಾಲಯದೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಉನ್ನತಮಟ್ಟದ ಸಭೆ ನಡೆಯಿತು.
ವಿಧಾನಸೌಧ ಸಮಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್ ಅವರೊಂದಿಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ, ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಮತ್ತು ಎಡಿಜಿಪಿಗಳು ಸೇರಿ 42 ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ವರ್ಚುವಲ್ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಭೆಗೆ ಹಾಜರಾಗಿದ್ದರು. ರಾಷ್ಟ್ರೀಯ ಮಾದಕ ದ್ರವ್ಯ ಸಹಾಯವಾಣಿ ಮಾನಸ್-1933 ಬಗ್ಗೆ ಚರ್ಚೆ ನಡೆಯಿತು. ಮಾದಕ ದ್ರವ್ಯದ ಬಗ್ಗೆ ಜನರು ದೂರು ಕೊಡಲು ಹೆಲ್ಪ್‌ಲೈನ್ 24*7 ಕೆಲಸ ಮಾಡಲಿದೆ. ಮಾದಕ ದ್ರವ್ಯ ಕಳ್ಳಸಾಗಣೆ, ಅಕ್ರಮ ಮಾರಾಟ, ಖರೀದಿ, ಸಂಗ್ರಹಣೆ, ಉತ್ಪಾದನೆ ಅಥವಾ ಗಾಂಜಾ ಬೆಳೆದವರ ಮಾಹಿತಿ ನೀಡಬಹುದು. ಮಾದಕ ದ್ರವ್ಯ ವರದಿಗೆ ಮತ್ತು ಸಹಾಯ ಪಡೆಯಲು ಜನಸ್ನೇಹಿ ವೇದಿಕೆಯಾಗಿ ಕಾರ್ಯನಿರ್ವಹಿಸಬೇಕೆಂದು ವಿವರಿಸಲಾಗಿದೆ.
ರಾಜ್ಯದಲ್ಲಿ ಮಾದಕ ವಸ್ತುಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳು ಮತ್ತು ಪೆಡ್ಲರ್‌ಗಳ ಬಂಧನ, ಡ್ರಗ್ಸ್ ಜಪ್ತಿ ಸೇರಿ ಸವಿವರವಾದ ಅಂಕಿ-ಅಂಶಗಳು ಒಳಗೊಂಡ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿಗೆ ಮಾಹಿತಿ ನೀಡಲಾಗಿದೆ. ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸಲಹೆ-ಸೂಚನೆಗಳು ಚರ್ಚೆ ನಡೆಸಲಾಗಿದೆ.