

ಇದೇ ವೇಳೆ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಹೈಡ್ರಾಮಾ ನೆಡಯಿತು. ನಾನು ಹಿಂದೆ ಸಲ್ಲಿಸಿದ್ದ ದೂರು ಆಧರಿಸಿ ಕೈಗೊಂಡ ಕ್ರಮದ ಬಗ್ಗೆ ಹಿಂಬರಹ ಕೊಡಬೇಕು ಎಂದು ಪ್ರದೀಪ್‌ಕುಮಾರ್ ಪಟ್ಟು ಹಿಡಿದರು. ಈಗ ಕೊಡುವುದಕ್ಕೆ ಬರುವುದಿಲ್ಲ ಎಂಬ ಪ್ರತಿಕ್ರಿಯೆ ನೀಡಿದ ಎಸ್ಪಿ ವಿರುದ್ಧ ಏರುದನಿಯಲ್ಲಿ ಪ್ರಶ್ನಿಸಿ, ಅಸಮಾಧಾನ ವ್ಯಕ್ತಪಡಿಸಿದರು.
ದೂರಿಗೆ ಹಿಂಬರಹ ಕೊಡಿ, ಇಲ್ಲವಾದಲ್ಲಿ ಸಿಎಂ ವಿರುದ್ಧ ಎಫ್‌ಐಆರ್ ದಾಖಲು ಮಾಡಿ. ಅಲ್ಲಿಯವರೆಗೂ ಕಚೇರಿ ಬಿಟ್ಟು ತೆರಳುವುದಿಲ್ಲ ಪ್ರದೀಪ್ ಪಟ್ಟು ಹಿಡಿದಿದ್ದರು. ಬಳಿಕ ಲೋಕಾಯುಕ್ತ ಎಸ್ಪಿ ಜೊತೆ ಮಾತುಕತೆ ನಡೆಸಿ ಪ್ರದೀಪ್ ಸ್ಥಳದಿಂದ ನಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್‌ಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ, ಭಾಮೈದ ಮಲ್ಲಿಕಾರ್ಜುನಸ್ವಾಮಿ ಹಾಗೂ ಅಕ್ರಮದಲ್ಲಿ ಭಾಗಿಯಾದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧಿಸುವಂತೆ ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಹೈಕೋರ್ಟ್ ಮಂಗಳವಾರ ನೀಡಿರುವ ಪ್ರಕಾರ, ನಾನು ಜುಲೈ 31ರಂದು ಹಾಗೂ ಆ.19ರಂದು ಸಲ್ಲಿಸಿರುವ ದೂರುಗಳನ್ನು ಆಧರಿಸಿ ಎಫ್‌ಐಆರ್ ದಾಖಲಿಸಲು ಅವಕಾಶವಿದೆ. ನ್ಯಾಯಾಲಯವೇ ಹೇಳಿರುವಂತೆ ಪೂರ್ವ ಅನುಮತಿಯೇನೂ ಬೇಕಾಗುವುದಿಲ್ಲ. ಆದ್ದರಿಂದ ತನಿಖೆಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದೇನೆ ಎಂದರು.