ನೌಕರನಿಗೆ ವಿಧಿಸಿದ್ದ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್: ಲಂಚ ಸ್ವೀಕರಿಸಿದ ಆರೋಪ

highcourt
Published on

ಬೆಂಗಳೂರು: ಲಂಚ ಪಡೆದ ಆರೋಪದಲ್ಲಿ ವಾಣಿಜ್ಯ ತೆರಿಗೆ ಆಧಿಕಾರಿ ಮತ್ತು ಗ್ರೂಪ್ ‘ಡಿ’ ನೌಕರನಿಗೆ ವಿಶೇಷ ನ್ಯಾಯಾಲಯ ವಿಧಿಸಿದ್ದ ನಾಲ್ಕು ವರ್ಷಗಳ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಮೊದಲ ಆರೋಪಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ನಿವೃತ್ತರಾಗಿದ್ದ ಸಿ.ಪಿ. ಯೋಗೇಶ್ವರ್, ನಾಲ್ಕನೇ ಆರೋಪಿ ಗ್ರೂಪ್ ‘ಡಿ’ ನೌಕರ ಮಹದೇವು ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಭ್ರಷ್ಟಾಚಾರ ಪ್ರಕರಣದ ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡಿದ್ದರೂ, ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ರುಜುವಾತು ಮಾಡಬಹುದು ಎಂದು ಪೀಠ ನುಡಿದಿದೆ.

ಪ್ರಕರಣದಲ್ಲಿ 3ನೇ ಆರೋಪಿಯಾಗಿದ್ದ ದ್ವಿತೀಯ ದರ್ಜೆ ಸಹಾಯಕ ಕೆ.ಎಂ. ಶಿವಕುಮಾರ್ ವಿರುದ್ಧದ ಆರೋಪವನ್ನು ನಿರೂಪಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತಿಳಿಸಿದ ನ್ಯಾಯಪೀಠ, ಆರೋಪ ಮುಕ್ತರನ್ನಾಗಿಸಿ ತೀರ್ಪು ಹೊರಡಿಸಿದೆ.

ಅಲ್ಲದೆ, ಮೊದಲನೇ ಆರೋಪಿ ವಾಣಿಜ್ಯ ತೆರಿಗೆ ಅಧಿಕಾರಿ ಯೋಗೇಶ್ ತನ್ನ ಬಳಿ 3,720 ರೂ. ಇರುವುದಾಗಿ ರಿಜಿಸ್ಟ್ರಾರ್‌ನಲ್ಲಿ ಘೋಷಿಸಿದ್ದಾರೆ. ಆದರೆ, ವಿಶ್ರಾಂತಿ ಕೊಠಡಿಯಲ್ಲಿ 41,510 ರೂ. ಪತ್ತೆಯಾಗಿವೆ. 4ನೇ ಆರೋಪಿ ಗ್ರೂಪ್ ‘ಡಿ’ ನೌಕರ ಮಹದೇವು ತನ್ನ ಬಳಿ ಕೇವಲ 800 ರೂ. ಮಾತ್ರ ಇತ್ತು ಎಂಬುದಾಗಿ ಘೋಷಿಸಿದ್ದು, ದಾಳಿ ಸಂದರ್ಭದಲ್ಲಿ 3,500 ರೂ. ಪತ್ತೆಯಾಗಿತ್ತು. ಈ ಹೆಚ್ಚುವರಿ ಹಣ ಎಲ್ಲಿಂದ ಬಂತು ಎಂಬುದಕ್ಕೆ ಸಂಬಂಧಿಸಿದಂತೆ ಇಬ್ಬರೂ ಸಮರ್ಪಕ ಉತ್ತರ ನೀಡಿರಲಿಲ್ಲ. ಹೀಗಾಗಿ ಹೆಚ್ಚುವರಿ ಹಣಕ್ಕೆ ಹೊಣೆಗಾರರಾಗುತ್ತಾರೆ ಎಂದು ತಿಳಿಸಿದ ಪೀಠ ಶಿಕ್ಷೆಯನ್ನು ಎತ್ತಿಹಿಡಿದಿದೆ.

ಆದರೆ, ಮೂರನೇ ಆರೋಪಿ ಶಿವಕುಮಾರ್ 2,900 ರೂ.ಗಳು ತನ್ನಲ್ಲಿರುವುದಾಗಿ ಘೋಷಿಸಿದ್ದು, ಕೇವಲ 2,665 ರೂ.ಗಳು ಮಾತ್ರ ಇತ್ತು. ಆದ್ದರಿಂದ ಅವರನ್ನು ಅಪರಾಧಿ ಎನ್ನಲು ಸಾಧ್ಯವಿಲ್ಲ. ಜತೆಗೆ, ಅವರನ್ನು ಶಿಕ್ಷೆಗೆ ಗುರಿಪಡಿಸಲು ಅಗತ್ಯ ಪುರಾವೆಗಳಿಲ್ಲ. ಪ್ರಕರಣದಲ್ಲಿ ಆರೋಪ ಮುಕ್ತರನ್ನಾಗಿ ಮಾಡಲಾಗುತ್ತಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net