ಪಾಸ್ಕಲ್ ಖುಲಾಸೆ ಆದೇಶ ಪುರಸ್ಕರಿಸಿದ ಹೈಕೋರ್ಟ್

highcourt
Published on

ಬೆಂಗಳೂರು:  ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಿಂದ ಬೆಂಗಳೂರಿನ ಫ್ರೆಂಚ್ ರಾಯಭಾರ ಕಚೇರಿಯ ಮಾಜಿ ಉದ್ಯೋಗಿ ಪಾಸ್ಕಲ್ ಮಜುರಿಯರ್ ಅವರನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಮಜುರಿಯರ್ ಅವರ ಪತ್ನಿ ಸುಜಾ ಜೋನ್ಸ್ ಮಜುರಿಯರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಪತ್ನಿ ಸುಜಾ ಉದ್ದೇಶಪೂರ್ವಕವಾಗಿ ಸರ್ಕಾರೇತರ ಸಂಸ್ಥೆ ಮತ್ತು ವೈದ್ಯರ ಸಹಾಯದಿಂದ ಅರ್ಜಿದಾರ ಮಜುರಿಯರ್ ಅವರನ್ನು ಭಾರತದಿಂದ ಹೊರಗೆ ಹೋಗದಂತೆ ತಡೆಯಲು ಈ ರೀತಿಯಾದ ಆರೋಪ ಮಾಡಿದ್ದಾರೆ. ಜತೆಗೆ ಅವರ ವಿರುದ್ಧ ಆರೋಪ ಸಾಬೀತುಪಡಿಸಲು ಯಾವುದೇ ತರಹದ ಸೂಕ್ತ ಪುರಾವೆಗಳಿಲ್ಲ ಎಂದು ಪೀಠ ಹೇಳಿದೆ.

ಅಲ್ಲದೆ, ಮಜುರಿಯರ್ ಖುಲಾಸೆಗೊಳಿಸುವಲ್ಲಿ ವಿಚಾರಣಾ ನ್ಯಾಯಾಲಯವು ಸಮರ್ಥನೀಯ ಆದೇಶ ನೀಡಿದೆ ಎಂದು ತೀರ್ಪನ್ನು ಬರೆದಿರುವ ನ್ಯಾಯಮೂರ್ತಿ ಹೇಮಲತಾ ಅವರು, ವೈದ್ಯಕೀಯ, ಮಾನಸಿಕ ಮತ್ತು ಸಾಕ್ಷ್ಯಾಧಾರಗಳನ್ನು ಸಂಪೂರ್ಣವಾಗಿ ಗಮನಿಸಿದರೆ ಆರೋಪ ಹೊರಿಸಲ್ಪಟ್ಟವರ ತಪ್ಪನ್ನು ಸಮಂಜಸ ಅನುಮಾನಗಳನ್ನು ಮೀರಿ ಪ್ರಶಂಸಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬುದು ಕಂಡುಬರುತ್ತದೆ. ಜತೆಗೆ ವೈದ್ಯಕೀಯ ಸಂಶೋಧನೆಗಳು ಆರೋಪವನ್ನು ಬೆಂಬಲಿಸುವುದಿಲ್ಲ ಮತ್ತು ಸಾಕ್ಷ್ಯಗಳು ಅಸಂಗತತೆಗಳು ಮತ್ತು ಕಾರ್ಯವಿಧಾನದ ಲೋಪಗಳಿಂದ ತುಂಬಿವೆ ಎಂದು ನ್ಯಾಯಪೀಠ ತಿಳಿಸಿದೆ.

ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸುತ್ತಿರುವಾಗ ಮಕ್ಕಳೊಂದಿಗೆ ದೇಶ ಬಿಟ್ಟು ಹೋಗುವುದನ್ನು ತಡೆಯಲು ದೂರುದಾರರು ತಮ್ಮ ಪತಿ ವಿರುದ್ಧ ಸುಳ್ಳು ಆರೋಪ ಹೊರಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದ ವಿಚಾರಣಾ ನ್ಯಾಯಾಲಯದ ತೀರ್ಮಾನವನ್ನು ಹೈಕೋರ್ಟ್ ಪರಿಗಣಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net