ಕೆ.ಜೆ. ಜಲಜಾಕ್ಷಿ ಅಮಾನತು ಆದೇಶಕ್ಕೆ ಹೈ ತಡೆ

highcourt
Published on

ಬೆಂಗಳೂರು: ‘ಸಂವಿಧಾನ ದಿನದ ’ ಅಂಗವಾಗಿ ವಿಧಾನಪರಿಷತ್ತಿನ ಸಚಿವಾಲಯದಲ್ಲಿ 2024ರ ನ.26ರಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಫೋಟೋ ಹಾಕಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ಪರಿಷತ್ತಿನ ಉಪ ಕಾರ್ಯದರ್ಶಿ ಕೆ.ಜೆ. ಜಲಜಾಕ್ಷಿ ಅವರನ್ನು ಅಮಾನತುಗೊಳಿಸಿ ವಿಧಾನಪರಿಷತ್ತಿನ ಕಾರ್ಯದರ್ಶಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

ಅಮಾನತು ಆದೇಶ ರದ್ದುಪಡಿಸುವಂತೆ ಕೋರಿ ಕೆ.ಜೆ. ಜಲಜಾಕ್ಷಿ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ವಾದ ಆಲಿಸಿದ ನ್ಯಾಯಪೀಠ, ಪರಿಷತ್ತಿನ ಉಪ ಕಾರ್ಯದರ್ಶಿ ಕೆ.ಜೆ. ಜಲಜಾಕ್ಷಿ ಅವರನ್ನು ಅಮಾನತುಗೊಳಿಸಿ ಜು.4ರಂದು ವಿಧಾನಪರಿಷತ್ತಿನ ಕಾರ್ಯದರ್ಶಿ ಹೊರಡಿಸಿದ್ದ ಆದೇಶಕ್ಕೆ ಮಧ್ಯಂತರ ತಡೆ ವಿಧಿಸಿದೆ. ಜತೆಗೆ ವಿಧಾನಪರಿಷತ್ತಿನ ಸಭಾಪತಿ ಹಾಗೂ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು. ಅಗತ್ಯಬಿದ್ದರೆ ತಡೆ ಆದೇಶವನ್ನು ಬದಲಿಸಲು ಅಥವಾ ಮಾರ್ಪಡಿಸಲು ಪ್ರತಿವಾದಿಗಳು ಕೋರಬಹುದು ಎಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net