

ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡರ್ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳಿಗೆ ಬೆದರಿಕೆಯೊಡ್ಡಿದ ಆರೋಪದಡಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಪ್ರಕರಣ ರದ್ದು ಕೋರಿ ವಿನಯ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ‘ಅಧಿಕಾರ ವ್ಯಾಪ್ತಿ ಇಲ್ಲದ ಕೋರ್ಟ್‌ನಲ್ಲಿ ಬೆದರಿಕೆ ಕೇಸ್ ದಾಖಲಿಸಲಾಗಿದೆ. ಹಾಗಾಗಿ ತಾಂತ್ರಿಕ ಕಾರಣಗಳಿಂದಾಗಿ ಕೇಸ್ ರದ್ದುಪಡಿಸಲಾಗುತ್ತಿದೆ’ ಎಂದು ಆದೇಶಿಸಿದೆ.
ಅಲ್ಲದೆ, ನಿಯಮಮದಂತೆ ಯೋಗೀಶ್ ಗೌಡರ್ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ನ್ಯಾಯಾಲಯದಲ್ಲೇ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಸಾಕ್ಷಿಗಳಿಗೆ ಬೆದರಿಕೆ ಪ್ರಕರಣ ದಾಖಲಿಸಬೇಕಿತ್ತು. ಆದರೆ, ಮತ್ತೊಂದು ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ:
2016ರ ಜೂ.15ರಂದು ಧಾರವಾಡದಲ್ಲಿ ಯೋಗೀಶ್ ಗೌಡರ್ ಕೊಲೆಯಾಗಿತ್ತು. ಆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಆರೋಪ ಎದುರಿಸುತ್ತಿದ್ದಾರೆ. ಕರ್ನಾಟಕ ಸರ್ಕಾರ ಆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದು, ಅದು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದೆ.
ಪ್ರಕರಣದಲ್ಲಿ ದತ್ತಾತ್ರೇಯ, ಆನಂದ್, ಮೋಹನ್ ಮತ್ತು ವಿನಾಯಕ ಹಾಗೂ ಲಕ್ಷ್ಮೀ ಅವರು ಪ್ರತ್ಯಕ್ಷದರ್ಶಿಗಳು ಎಂದು ಹೇಳಲಾಗಿದೆ. ಆದರೆ, ವಿಚಾರಣೆ ವೇಳೆ ಅವರು ಪ್ರತಿಕೂಲ ಸಾಕ್ಷಿಗಳಾಗಿ ನ್ಯಾಯಾಲಯದ ಮುಂದೆ ಸಾಕ್ಷ್ಯ ಹೇಳಿದ್ದಾರೆ. ವಿನಯ್ ಕುಲಕರ್ಣಿ ಅವರು ಸಾಕ್ಷಿಗಳನ್ನು ಬೆದರಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಧಾರವಾಡದ ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎ್ಸಿ ಕೋರ್ಟ್‌ನಲ್ಲಿ ಕುಲಕರ್ಣಿ ವಿರುದ್ಧ ಸಾಕ್ಷಿಗಳಿಗ ಬೆದರಿಕೆಯೊಡ್ಡಲಾಗಿದೆ ಎಂದು ಐಸಿಸಿ ಸೆಕ್ಷನ್ 195ಎ ಅಡಿ ಖಾಸಗಿ ದೂರು ದಾಖಲಿಸಲಾಗಿತ್ತು. ಅದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.