

ಬೆಂಗಳೂರು : ಸ್ವಚ್ಛ ಭಾರತ್ ಅಭಿಯಾನದಡಿ ರಾಯಚೂರು ಜಿಲ್ಲೆಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ನಿಗದಿ ಪಡಿಸಿದ್ದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದು ಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಏಳು ಮಂದಿ ಆರೋಪಿಗಳು ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಟಿ. ವೆಂಕಟೇಶ್ ನ್ಯಾಯಕ್ ಅವರಿದ್ದ ಕಲಬುರಗಿ ನ್ಯಾಯಪೀಠ ಪೀಠ ಈ ಆದೇಶ ನೀಡಿದೆ.
ತನಿಖಾಧಿಕಾರಿಗಳು ಅರ್ಜಿದಾರರ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಈ ಸಂಬಂಧ ಆರೋಪಿಗಳ ಅಕ್ರಮ ನಡೆಸಿದ್ದಾರೆ, ಅಥವಾ ಇಲ್ಲವೇ ಎಂಬ ಅಂಶ ತನಿಖಾಧಿರಿಗಳು ವಿವರಣೆ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ವಿಚಾರಣೆ ನಡೆಸಯಬೇಕಾದ ಅಗತ್ಯವಿದೆ. ಅಲ್ಲದೆ, ಅರ್ಜಿದಾರರು ಯಾವುದೇ ತಪ್ಪು ಮಾಡಿಲ್ಲ ಎಂಬುದಾದರೆ, ತಮ್ಮನ್ನು ಪ್ರಕರಣದಿಂದ ಕೈಬಿಡುವಂತೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿರುವ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ರಾಯಚೂರು ಜಿಲ್ಲೆಯ ಜಿಲ್ಲೆಯ ಹೊನ್ನಾಳಿ ಗ್ರಾಮ ಪಂಚಾಯತ್‌ನ ಹೊನ್ನಾಳಿ, ಗುಡದನಹಳ್ಳಿ ಮತ್ತು ಯಾರಡೋಣ ಗ್ರಾಮಗಳಲ್ಲಿ ೨೦೧೬ರಿಂದ ಜುಲೈ ೧ ರಿಂದ ೨೦೧೭ರ ಮೇ ೧೭ರವರೆಗಿನ ಅವಧಿಯಲ್ಲಿ ೭೭೯ ಶೌಚಾಲಯಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿತ್ತು. ಆದರೆ, ಆರೋಪಿಗಳು ೫೩೧ ಶೌಚಾಲಯಗಳನ್ನು ನಿರ್ಮಾಣ ಮಾಡದೆ ೬೮.೧೯ ಲಕ್ಷ ರೂ.ಗಳ ಅಕ್ರಮ ನಡೆಸಿದ್ದು, ಸರ್ಕಾರದ ಭೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಬಾಬು ರಾಥೋಡ್ ಲಿಂಗಸಗೂರು ಠಾಣೆಗೆ ದೂರು ದಾಖಲಿಸಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸ್ ಆಧಿಕಾರಿಗಳು ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.