ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ FIR ರದ್ದುಗೊಳಿಸಿದ ಹೈಕೋರ್ಟ್​

by (4)
Published on

ಬೆಂಗಳೂರು: ಹಾವೇರಿ ಜಿಲ್ಲೆಯ ರೈತನೊಬ್ಬನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಎಫ್​ಐಆರ್(FIR)​ ಅನ್ನು ಇದೀಗ ಹೈಕೋರ್ಟ್​ ರದ್ದುಗೊಳಿಸಿ ಗುರುವಾರ ಆದೇಶಿಸಿದೆ.

ನನ್ನ ಮೇಲೆ ಹಾಕಿರುವ ಎಫ್​ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್​​ ಮೆಟ್ಟಿಲೇರಿದ್ದ​ ಸಂಸದ ತೇಜಸ್ವಿ ಸೂರ್ಯ ಮನವಿ ಮೇರೆಗೆ ನ್ಯಾಯಮೂರ್ತಿ ನಾಗಪ್ರಸನ್ನ ಇದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

ತೇಜಸ್ವಿ ಸೂರ್ಯ ಪರ ವಕೀಲ ಅರುಣ್​ ಶ್ಯಾಮ್​ ವಾದ ಮಂಡಿಸಿ, ಬಿಜೆಪಿ ಸಂಸದರು ತಮ್ಮ (ಏಕ್ಸ್​) ಟ್ವೀಟ್‌ನಲ್ಲಿನ ವಿಷಯ ವಿವಾದವಾದ ನಂತರ ತಕ್ಷಣವೇ ಅದನ್ನು ಅಳಿಸಿದ್ದಾರೆ ಮತ್ತು ಯಾವುದೇ ಅಶಾಂತಿಯನ್ನು ಸೃಷ್ಟಿಸುವ ಉದ್ದೇಶವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ವಾದ ವಿವಾದ ಬಳಿಕ ಸೂರ್ಯ ಮನವಿಯ ಮೇಲೆ ಹೈಕೋರ್ಟ್ ತನ್ನ ಆದೇಶಗಳನ್ನು ಕಾಯ್ದಿರಿಸಿ, BNSನ ಸೆಕ್ಷನ್ 353 (2) ರ ಅಂಶಗಳನ್ನು ಪೂರೈಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ಮುಂದಿನ ಕ್ರಮ ತಗೆದುಕೊಳ್ಳಲಾಗುವುದು ಎಂದು ಇದೇ ನ.14 ರಂದು ಸೂರ್ಯ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿತ್ತು. ಇದೀಗ ಎಫ್​ಐಆರ್​ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಸಂಸದ ತೇಜಸ್ವಿ ಪೋಸ್ಟ್​ ಮಾಡಿದ್ದಾದರು ಏನು?

ಇದೇ ನ.8ರಂದು ತಮ್ಮ ಎಕ್ಸ್​ ಖಾತೆಯಲ್ಲಿ ''ತನ್ನ ಭೂಮಿಯನ್ನು ವಕ್ಫ್ ಮಂಡಳಿಯಿಂದ ಸ್ವಾಧೀನಪಡಿಸಿಕೊಂಡ ನಂತರ ರಾಜ್ಯದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ'' ಎಂದು ಪೋಸ್ಟ್ ಮಾಡಿದ್ದರು.

''ಅಲ್ಪಸಂಖ್ಯಾತರನ್ನು ಓಲೈಸುವ ತರಾತುರಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಕರ್ನಾಟಕದಲ್ಲಿ ದಿನೇ ದಿನೇ ತಡೆಯಲು ಅಸಾಧ್ಯವಾಗುತ್ತಿರುವ ದುರಂತದ ಪರಿಣಾಮಗಳನ್ನು ಬಿಚ್ಚಿಟ್ಟಿದ್ದಾರೆ'' ಎಂದು ಪೋಸ್ಟ್ ಹಂಚಿಕೊಂಡಿದ್ದು, ಅಲ್ಲದೇ, ಅವರು ಸ್ಥಳೀಯ ಪೋರ್ಟಲ್‌ನ ಸುದ್ದಿಗೆ ಲಿಂಕ್‌ಗಳನ್ನು ಪೋಸ್ಟ್ ಮಾಡಿದ್ದರು.

ನಂತರ ಮೃತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ ಬಳಿಕ ಸಂಸದರ ಮೇಲೆ ಎಫ್​ಐಆರ್​ ದಾಖಲಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net