ಮಹಿಳಾ ಸರಣಿ ಹಂತಕಿ ಸೈನೈಡ್ ಮಲ್ಲಿಕಾ ಗಲ್ಲುಶಿಕ್ಷೆ ರದ್ದುಪಡಿಸಿದ ಹೈಕೋರ್ಟ್

highcourt
Published on

ಪವಿತ್ರಾ ಕುಂದಾಪುರ ಬೆಂಗಳೂರು
ಒಂದು ಕಾಲದಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಮಹಿಳಾ ಸೀರಿಯಲ್ ಕಿಲ್ಲರ್ ಕೆ.ಡಿ. ಕೆಂಪಮ್ಮ ಅಲಿಯಾಸ್ ಸೈನೈಡ್ ಮಲ್ಲಿಕಾ ವಿರುದ್ಧದ ಮತ್ತೊಂದು ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ರಿಲೀಫ್ ಕೊಟ್ಟಿದೆ. ಇದೊಂದು ‘ಅಪರೂಪದಲ್ಲೇ ಅಪರೂಪ ಎನ್ನುವ ಪ್ರಕರಣವೇನೂ ಅಲ್ಲ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು 20 ವರ್ಷ ಜೀವಾವಧಿ ಸಜೆಯಾಗಿ ಮಾರ್ಪಾಡುಗೊಳಿಸಿ ಆದೇಶಿಸಿದೆ.


2007ರ ಡಿಸೆಂಬರ್‌ನಲ್ಲಿ ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯದಲ್ಲಿ ನಡೆದಿದ್ದ ಕೆ. ನಾಗಲಕ್ಷ್ಮೀ ಕೊಲೆ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಸೆಷನ್ಸ್ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಮಲ್ಲಿಕಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ ಅವರರಿದ್ದ ವಿಭಾಗೀಯ ಪೀಠ, ಮರಣದಂಡನೆ ಶಿಕ್ಷೆಯನ್ನು ಬದಲಾಯಿಸಿದೆ.


2018ರ ಜ. 20 ಮತ್ತು 27ರಂದು ಬೆಂ. ಗ್ರಾಮಾಂತರ ಸೆಷನ್ಸ್ ನ್ಯಾಯಾಲಯ ನೀಡಿರುವ ಮರಣದಂಡನೆ ಶಿಕ್ಷೆಯನ್ನು ಮಾರ್ಪಾಡುಗೊಳಿಸಿ, 20 ವರ್ಷ ಜೀವಾವಧಿ ಶಿಕ್ಷೆ ನಿಗದಿಪಡಿಸಲಾಗಿದೆ. ಈವರೆಗೆ ಅಪರಾಧಿ ಅನುಭವಿಸಿರುವ ಸೆರೆವಾಸವೂ 20 ವರ್ಷದ ಶಿಕ್ಷೆಗೆ ಸೇರ್ಪಡೆಗೊಳ್ಳುತ್ತದೆ. ಈ ಮಧ್ಯೆ ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ಪರಿಗಣಿಸದಂತೆ ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.


ಸೈನೈಡ್ ಮಲ್ಲಿಕಾ ಪರ ವಾದ ಮಂಡಸಿದ ವಕೀಲ ವೆಂಕಟೇಶ್ ಪಿ. ದಳವಾಯಿ, ಪ್ರಕರಣದಲ್ಲಿ ಪ್ರಬಲ ಸಾಕ್ಷ್ಯಾಧಾರಗಳ ಕೊರತೆಯಿದೆ. ವಿಚಾರಣಾ ನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ಗಂಭೀರ ದೋಷವಿದೆ. ಕಾನೂನು, ಸಾಕ್ಷಾೃಧಾರ ಹಾಗೂ ಪ್ರಕರಣದ ಸಂಭವನೀಯತೆಗೆ ವಿರುದ್ಧವಾಗಿ ಶಿಕ್ಷೆ ವಿಧಿಸಲಾಗಿದೆ. ಈಕೆಯೇ ಕೊಲೆ ಮಾಡಿದ್ದಾಳೆ ಎಂಬುದನ್ನು ಸಾಕ್ಷೀಕರಿಸಲು ಪ್ರತ್ಯಕ್ಷ ಸಾಕ್ಷಿ ಇಲ್ಲ.

ಅಲ್ಲದೆ, ಆರೋಪ ಸಾಬೀತುಪಡಿಸಲೂ ನೇರ ಸಾಕ್ಷಾೃಧಾರ ಇಲ್ಲ. ಇಡೀ ಪ್ರಕರಣ ಸಾಂದರ್ಭಿಕ ಸಾಕ್ಷಾೃಧಾರಗಳ ಮೇಲೆಯೇ ನಿಂತಿದೆ. ಇದೆಲ್ಲವನ್ನೂ ದೃಢೀಕರಿಸುವಲ್ಲಿ ಪ್ರಾಸಿಕ್ಯೂಷನ್ ವಿಲವಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಹೊಂದಾಣಿಕೆಯೇ ಆಗ್ತಿಲ್ಲ
2007 ಡಿ. 30ರ ಮಧ್ಯಾಹ್ನ 2.45ರಲ್ಲಿ ಮೊಬೈಲ್ ಫೋನ್ ಮಾರಾಟ ಮಾಡಲು ಬಂದಿದ್ದ ಅನುಮಾನಾಸ್ಪದ ಮಹಿಳೆಯ ಬಗ್ಗೆ ಸ್ವೀಕರಿಸಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಕಲಾಸಿಪಾಳ್ಯ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್, ಮಹಿಳಾ ಕಾನ್‌ಸ್ಟೆಬಲ್ ನೆರವಿನಿಂದ ಮಹಿಳೆಯಿಂದ ಬಂಧಿಸಿದ್ದಾಗಿ ಹೇಳಿದ್ದಾರೆ. ಆದರೆ, ಬಂಧನ ದಿನಾಂಕ, ಹೇಳಿಕೆ ದಾಖಲಿಸಿಕೊಂಡ ದಿನಾಂಕಕ್ಕೂ ಹೊಂದಾಣಿಕೆ ಆಗುತ್ತಿಲ್ಲ.

ಅಲ್ಲದೆ, ಬಂಧಿಸಿದ ಮಹಿಳೆಯಿಂದ ಸೈನೈಡ್ ಜಪ್ತಿ ಮಾಡಿದ್ದಾಗಿ ವಿಚಾರಣೆ ವೇಳೆ ವಾದಿಸಲಾಗಿದೆ. ಆದರೆ, ವಶಕ್ಕೆ ಪಡೆದ ವಸ್ತುವು ಸೈನೈಡ್ ಅಥವಾ ಟಾಲ್ಕಂ ಪೌಡರ್ ಏನು ಎಂಬುದನ್ನು ದೃಢೀಕರಿಸಿಕೊಳ್ಳಲು ಎ್ಎಸ್‌ಎಲ್‌ಗೆ ಕಳುಹಿಸಿಲ್ಲ ಎಂದು ವೆಂಕಟೇಶ್ ಪಿ. ದಳವಾಯಿ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ಆರೋಪಿಯಿಂದ ಜಪ್ತಿ ಮಾಡಿದ ಚಿನ್ನಾಭರಣಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸಿಲ್ಲ.

ಕೊಲೆಯಾದ ನಾಗಲಕ್ಷ್ಮೀ ಪತಿ, ಮಹಜರು ಸಂದರ್ಭದಲ್ಲಿ ಮಲ್ಲಿಕಾಳ ಬ್ಯಾಗ್‌ನಲ್ಲಿದ್ದ ಆಭರಣಗಳನ್ನು ಗುರುತಿಸುವಲ್ಲಿ ವಿಲರಾಗಿದ್ದಾರೆ. ಮೃತದೇಹದ ಮೇಲೆ ಕಾಲ್ಗೆಜ್ಜೆ, ಮೂಗುತಿ ಮತ್ತು ಕಾಲುಂಗುರಗಳಿದ್ದವು ಎಂದು ಸಾಕ್ಷ್ಯ ನುಡಿದಿದ್ದಾರೆ. ಆಭರಣಕ್ಕಾಗಿಯೇ ಕೊಲೆ ಮಾಡುವ ಉದ್ದೇಶವಿದ್ದರೆ ಇದನ್ನೆಲ್ಲ ಕೊಂಡೊಯ್ಯುತ್ತಿದ್ದಳಲ್ಲವೆ ಎಂದು ಮಲ್ಲಿಕಾ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ಸೈನೈಡ್ ಕೊಟ್ಟು, ಕುತ್ತಿಗೆ ಬಿಗಿದು ಹತ್ಯೆ
2007 ಡಿ.18ರಂದು ದೊಡ್ಡಬಳ್ಳಾಪುರ ಸಮೀಪದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕರೆದೊಯ್ಯುವ ನೆಪದಲ್ಲಿ ಕೆ. ನಾಗಲಕ್ಷ್ಮೀಯನ್ನು ಕೊಲೆ ಮಾಡಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಳು. ರೂಂಗೆ ಕರೆದೊಯ್ದು ಸೈನೈಡ್ ನೀಡಿದ್ದಲ್ಲದೆ ನಂತರ ಆಕೆಯ ಕುತ್ತಿಗೆಗೆ ಎಲೆಕ್ಟ್ರಿಕ್ ವೈರ್ ಬಿಗಿದು ಹತ್ಯೆಗೈದಿದ್ದಳು.

ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ಅಧೀನ ನ್ಯಾಯಾಲಯ 2012ರ ಜ. 31ರಂದು ಮಲ್ಲಿಕಾಗೆ ಗಲ್ಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಮಲ್ಲಿಕಾ, ರಿಜಿಸ್ಟ್ರಾರ್ ಮೂಲಕ ಹೈಕೋರ್ಟ್ ಮೊರೆ ಹೋಗಿದ್ದಳು.

ದಿಢೀರ್ ಶ್ರೀಮಂತಳಾಗುವ ಆಸೆ
ಬೆಂಗಳೂರಿನ ಹೊರವಲಯದ ಕಗ್ಗಲೀಪುರದಲ್ಲಿ ಜನಿಸಿದ್ದ ಮಲ್ಲಿಕಾ, ಬೇಗ ಶ್ರೀಮಂತಳಾಗಬೇಕೆಂಬ ಆಸೆಯಿಂದ ಮನೆ ಬಳಿಯೇ ಚಿಟ್ ಫಂಡ್ ಯೋಜನೆ ಆರಂಭಿಸಿ, ನಷ್ಟ ಅನುಭವಿಸಿದ್ದಳು. ಇದೇ ವಿಚಾರವಾಗಿ ಪತಿ ತೊರೆದಿದ್ದ. ನಂತರ ಮನೆಕೆಲಸಕ್ಕೆ ಸೇರಿ, ಅದೇ ಮನೆಗಳಿಂದ ಆಭರಣ ಕದ್ದು ಜೈಲು ಸೇರಿದ್ದಳು.

ಬಿಡುಗಡೆಯಾದ ನಂತರ ಅಕ್ಕಸಾಲಿಗನ ಬಳಿ ಕೆಲಸಕ್ಕೆ ಸೇರಿ ಸೈನೈಡ್ ವಿಚಾರ ತಿಳಿದಳು. ಕಷ್ಟ ಎಂದು ದೇವಾಲಯಕ್ಕೆ ಬರುವ ಮಹಿಳಾ ಭಕ್ತರನ್ನು ಆತ್ಮೀಯವಾಗಿ ಮಾತನಾಡಿಸಿ, ಪೂಜೆ ನೆಪದಲ್ಲಿ ದೇಗುಲಕ್ಕೆ ಕರೆಸುತ್ತಿದ್ದಳು. ಕಣ್ಣು ಮುಚ್ಚಿ ಪ್ರಾರ್ಥಿಸಲು ಹೇಳಿ ಸೈನೈಡ್ ಮಿಶ್ರಿತ ತೀರ್ಥ ಕುಡಿಯಲು ಕೊಟ್ಟು ಹತ್ಯೆ ಮಾಡಿ, ಆಭರಣ ದೋಚುತ್ತಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net