

ಬೆಂಗಳೂರು: ಯಾವುದೇ ವ್ಯಕ್ತಿಯ ಮೇಲೆ ಕಣ್ಗಾವಲು ಇಡುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಮೌಖಿಕವಾಗಿ ಹೇಳಿರುವ ಹೈಕೋರ್ಟ್, ರೌಡಿ ಶೀಟರ್ ಸೈಲೆಂಟ್ ಸುನೀಲ್ ವಿರುದ್ಧ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧದ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ.
ಕೇಂದ್ರೀಯ ಅಪರಾಧ ದಳದ ಡಿಸಿಪಿ ಶ್ರೀನಿವಾಸ್ ಗೌಡ ಮತ್ತು ಸಹಾಯಕ ಸಬ್ ಇನ್‌ಸ್ಪೆಕ್ಟರ್ ಪಿ.ಹರೀಶ್ ಅವರು ಸಲ್ಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಹೆಬ್ಬಾಳದ ನಿವಾಸಿಯಾಗಿರುವ ಸೈಲೆಂಟ್ ಸುನೀಲ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಅರ್ಜಿಯನ್ನು ಪುರಸ್ಕಲಾಗಿದ್ದು, ಪ್ರಕರಣ ರದ್ದುಪಡಿಸಲಾಗಿದೆ ರಜಾಕಾಲದ ಬಳಿಕ ವಿಸ್ತೃತ ಆದೇಶ ಲಭ್ಯವಾಗಲಿದೆ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರ ಪರ ವಕೀಲರು ವಾದ ಮಂಡಿಸಿ ಸೈಲೆಂಟ್ ಸುನೀಲ್ ಹೆಸರು ರೌಡಿ ಶೀಟರ್ ಪಟ್ಟಿಯಲ್ಲಿದ್ದು, ಇದುವರೆಗೂ ಅವರಿಗೆ ಒಂದೇ ಒಂದು ನೋಟಿಸ್ ನೀಡಿಲ್ಲ. ಪೊಲೀಸರು ಪದೇ ಪದೆ ಪೊಲೀಸ್ ಠಾಣೆಗೆ ಕರೆಯುತ್ತಿದ್ದಾರೆ. ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಅಫಿಡವಿಟ್ ಸಲ್ಲಿಸಲು ಸುನೀಲ್ ಸಿದ್ಧರಿದ್ದಾರೆ. 2019ರಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಈಗ ಉದ್ಯಮ ನಡೆಸುತ್ತಿದ್ದಾರೆ ಎಂದು ವಿವರಣೆ ನೀಡಿದರು.
ರಾಜ್ಯ ಸರ್ಕಾರದ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ವಾದ ಮಂಡಿಸಿ, ಅರ್ಜಿದಾರರ ಸಲ್ಲಿಸಿರುವ ಫೋಟೊಗಳನ್ನು ನೋಡಿದರೆ ಎಲ್ಲವೂ ತಿಳಿಯಲಿದೆ. ಕಣ್ಗಾವಲು ಇಡುವ ವಿಚಾರದಲ್ಲಿ ವಿನಾಯಿತಿ ಇದೆ. ಅರ್ಜಿದಾರರು ಹಿಂದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದರು.
ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠವು, ಸುತ್ತಮುತ್ತಲಿನ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಶಾಂತಿ ಕಾಪಾಡಲು ನಿಗಾ ಇಡುವುದು ಸರಿ. ಆದರೆ, ಎ್ಲ ಪ್ರಕರಣಗಳಲ್ಲೂ ಅಲ್ಲ. ಕಣ್ಗಾವಲು ಇಡುವುದು ಕಾನೂನಿನ ವ್ಯಾಪ್ತಿಯಲ್ಲಿರಬೇಕೆಂದು ಮೌಖಿಕವಾಗಿ ಹೇಳಿದ್ದು ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.