

ಬೆಂಗಳೂರು: ಬೇಸಿಗೆ ಕಾಲ ಮುಗಿಯುವವರೆಗೆ ಮಾ.15ರಿಂದ ಅನ್ವಯಿಸುವಂತೆ ಕರ್ನಾಟಕದ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯದಲ್ಲಿ ವಕೀಲರಿಗೆ ಕಪ್ಪು ಕೋಟ್ ಧರಿಸುವುದರಿಂದ ವಿನಾಯಿತಿ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ವಿನಾಯಿತಿ ನೀಡುವಂತೆ ಇತ್ತೀಚೆಗೆ ಹೈಕೋರ್ಟ್‌ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರಿಗೆ ಬೆಂಗಳೂರು ವಕೀಲರ ಸಂಘ ಈಚೆಗೆ ಪತ್ರ ಬರೆದಿತ್ತು.
ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಕಪ್ಪು ಕೋಟ್ ಹಾಕುವುದರಿಂದ ವಕೀಲರಿಗೆ ವಿನಾಯಿತಿ ಕಲ್ಪಿಸಲಾಗಿದೆ. ಆ ಎರಡೂ ರಾಜ್ಯಗಳಂತೆ ಕರ್ನಾಟಕದಲ್ಲೂ ಅದೇ ವಾತಾವರಣ ಇದೆ. ವಿನಾಯಿತಿ ಕೊಡಬೇಕು ಎಂದು ಮನವಿ ಮಾಡಿತ್ತು.
ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಎಲ್ಲಿಯೂ ಹವಾನಿಯಂತ್ರಿತ ವ್ಯವಸ್ಥೆ ಇಲ್ಲದಿರುವುದರಿಂದ ಈಗಷ್ಟೇ ಬಿಸಿಲ ಬೇಗೆ ಹೆಚ್ಚುತ್ತಿದ್ದು, ಈ ಸಂದರ್ಭದಲ್ಲಿ ಬಿಳಿಯ ಬಟ್ಟೆಯ ಮೇಲೆ ಕಪ್ಪು ಕೋಟ್ ಮತ್ತು ಬ್ಯಾಂಡ್ ಹಾಕುವುದು ಕಷ್ಟವಾಗಿದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಕಪ್ಪು ಕೋಟ್ ಧರಿಸುವುದರಿಂದ ಬೇಸಿಗೆ ರಜಾಕಾಲ ಮುಗಿದು ನ್ಯಾಯಾಲಯಗಳು ಕೆಲಸ ಪುನಾರಂಭಿಸುವವರೆಗೆ ಮಾರ್ಚ್ 15ರಿಂದ ಅನ್ವಯವಾಗುವಂತೆ ವಿನಾಯಿತಿ ನೀಡಬೇಕು ಕೋರಲಾಗಿತ್ತು