ವೈದ್ಯಕೀಯ ಕಾಯ್ದೆಗಳ ತಿದ್ದುಪಡಿ ಆಕ್ಷೇಪ: ಎಜಿಗೆ ಹೈಕೋರ್ಟ್ ನೋಟಿಸ್

highcourt
Published on

ಬೆಂಗಳೂರು:  ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ಕಾರ್ಯನಿರ್ವಹಣೆಯ ಮೇಲೆ ನಿಗಾ ವಹಿಸಲು ‘2007ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮೂಲ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಹಾಗೂ ಕಾಯ್ದೆಗೆ ಕಾಲ ಕಾಲಕ್ಕೆ ತರಲಾಗಿರುವ ತಿದ್ದುಪಡಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಅಡ್ವೋಕೇಟ್ ಜನರಲ್‌ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಕಾಯ್ದೆ ಆಕ್ಷೇಪಿಸಿ ಭಾರತೀಯ ವೈದ್ಯಕೀಯ ಪರಿಷತ್ತಿನ (ಐಎಂಎ) ಕಾನೂನು ಕೋಶದ ಅಧಿಕೃತ ಪ್ರತಿನಿಧಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಡಾ. ಕೆ. ರವಿಪ್ರಕಾಶ್ ಅವರು 2018ರಲ್ಲಿ ಸಲ್ಲಿಸಿರುವ ತಕರಾರು ಅರ್ಜಿಯು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರ ವಕೀಲ ಡಿ. ಕೃಷ್ಣಮೂರ್ತಿ ವಕಾಲತ್ತು ವಹಿಸಿದ್ದರು.

ಕಳೆದ ಬಾರಿಯ ವಿಚಾರಣೆ ವೇಳೆ ಮೂಲ ಕಾಯ್ದೆಗೆ ಕಾಲಾನುಕ್ರಮದಲ್ಲಿ ತರಲಾಗಿರುವ ತಿದ್ದುಪಡಿಗಳನ್ನು ಪ್ರಶ್ನಿಸಲಾಗಿಲ್ಲ ಎಂದು ಆಕ್ಷೇಪ ಎತ್ತಲಾಗಿತ್ತು. ಅದರಂತೆ, 2019ರಲ್ಲಿ ಸೇರಿದಂತೆ ಮೂಲ ಕಾಯ್ದೆಗೆ ಆಗಾಗ ತರಲಾಗಿರುವ ತಿದ್ದುಪಡಿಗಳನ್ನು ಸೇರಿಸಿ ಅರ್ಜಿದಾರರ ವಕೀಲರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅದನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಹಾಗೂ ಲೋಪಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿರುವ ಹಿನ್ನೆಲೆಯಲ್ಲಿ ಅಡ್ವೋಕೇಟ್ ಜನರಲ್ ಅವರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಹೇಳಿದ ನ್ಯಾಯಪೀಠ, ರಾಜ್ಯ ಸರ್ಕಾರ, ಆರೋಗ್ಯ ಇಲಾಖೆ, ಐಎಂಎ ಮತ್ತಿತರ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೆ ಆದೇಶಿಸಿತು. ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಜು. 24ಕ್ಕೆ ಮುಂದೂಡಿತು.

2007ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮೂಲ ಕಾಯ್ದೆ ಹಾಗೂ ಅದಕ್ಕೆ ಕಾಲಕಾಲಕ್ಕೆ ತರಲಾಗಿರುವ ತಿದ್ದುಪಡಿಗಳನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net