

ಬೆಂಗಳೂರು: ಉದ್ಯೋಗಿಯು ತಮ್ಮ ಸೇವಾವಧಿಯಿಂದ ನಿವೃತಿ ಹೊಂದಿದ ನಂತರ ತನ್ನ ಹುಟ್ಟಿದ ದಿನಾಂಕವನ್ನು ಬದಲಾಯಿಸಲು ಅನುಮತಿಸಲಾಗುವುದಿಲ್ಲ ಎಂದು ಹೈಕೋರ್ಟ್ ಧಾರವಾಡ ಪೀಠ ಮಂಗಳವಾರ ಅಭಿಪ್ರಾಯಪಟ್ಟಿದೆ.
ಜನ್ಮ ದಿನಾಂಕ ಬದಲಾಯಿಸುವಂತೆ ಕೋರಿ ಗುಡ್ಡಪ್ಪ ನಿಂಗಪ್ಪ ಕೋಲಾಜಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರ ಏಕಸದಸ್ಯ ಪೀಠ ಹೀಗೆ ಹೇಳಿದೆ.
ಅರ್ಜಿದಾರರು ಉದ್ಯೋಗಕ್ಕೆ ಸೇರುವ ವೇಳೆ 1952ರಲ್ಲಿ ಜನಿಸಿರುವುದಾಗಿ ಹೇಳಿದ್ದಾರೆ. ಆದರೆ, ತಮ್ಮ ನಿವೃತ್ತಿಯ ಎರಡು ವರ್ಷಗಳ ನಂತರ ಜನ್ಮ ದಿನಾಂಕ ಬದಲಾಯಿಸಲು ಯತ್ನಿಸಿದ್ದಾರೆ. ಈ ಬೆಳವಣಿಗೆ ಅವರ ಹಕ್ಕಿನ ನ್ಯಾಯಸಮ್ಮತತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಲಿದೆ ಎಂದು ಪೀಠ ತಿಳಿಸಿದೆ.
ಅರ್ಜಿದಾರರು ತಮ್ಮ ನಿವೃತ್ತಿ ಪ್ರಯೋಜನಗಳನ್ನು ಸ್ವೀಕರಿಸಿದ್ದಾರೆ ಮತ್ತು ಅವರ ಸೇವೆಯ ಸಮಯದಲ್ಲಿ ಅಥವಾ ನಿವೃತ್ತಿಯ ನಂತರ ಯಾವುದೇ ವಿವಾದವನ್ನು ಎತ್ತಿಲ್ಲ. ನಿವೃತ್ತಿಯ ಎರಡು ವರ್ಷಗಳ ನಂತರ ಮಾಡಿದ ಅರ್ಜಿದಾರರ ಹೇಳಿಕೆಯು ವಿಶ್ವಾಸಾರ್ಹತೆಯನ್ನು ಹೊಂದಿಲ್ಲ. ಇದು ಅನಗತ್ಯ ಲಾಭವನ್ನು ಪಡೆಯುವ ಪ್ರಯತ್ನವಾಗಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.
ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಉದ್ಯೋಗಿಯು ತಮ್ಮ ಸೇವೆಯ ಸಮಯದಲ್ಲಿ ಯಾವುದೇ ವ್ಯತ್ಯಾಸಗಳನ್ನು ಸರಿಪಡಿಸಲು ಅವಕಾಶವಿದೆ. ನಿವೃತ್ತಿಯ ನಂತರ ಹುಟ್ಟಿದ ದಿನಾಂಕವನ್ನು ಬದಲಾಯಿಸಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದೆ.