

ಬೆಂಗಳೂರು: ಅಪ್ರಾಪ್ತೆ ಮೇಲೆ ವಿವಾಹಿತ ಪುರುಷ ಲೈಂಗಿಕ ದೌರ್ಜನ್ಯ ಎಸಗುವುದು ಅಕ್ಷ್ಯಮ್ಯ ಅಪರಾಧ. ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಕಠಿಣ ಸಂದೇಶ ರವಾನೆಯಾಗಬೇಕಾದ ಅನಿವಾರ್ಯತೆ ಹೆಚ್ಚಿದೆ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತನ್ನದೇ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತೆಯನ್ನು ಅಪಹರಣ ಮಾಡಿ ಲೈಂಗಿಕ ದೌಜರ್ನ್ಯವೆಸಗಿದ್ದಲ್ಲದೇ, ಹಣಕ್ಕಾಗಿ ಢಾಬಾವೊಂದರಲ್ಲಿ ಕೆಲಸಕ್ಕೆ ನಿಯೋಜಿಸಿದ ಆರೋಪದಲ್ಲಿ ಬಂಧಿತನಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಶಿಢ್ಲಘಟ್ಟ ತಾಲೂಕಿನ ಚಂದ್ರಪ್ಪ ಎಂಬುವವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರ ಆರೋಪಿಗೆ 37 ವರ್ಷ ವಯಸ್ಸಾಗಿದ್ದು,ಆತ ವಿವಾಹಿತನಾಗಿದ್ದಾನೆ. ಈತನು ಅಪ್ರಾಪ್ತೆಯನ್ನು ಮಾವಿನ ತೋಟಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವುದು, ಆಕೆ ವಯಸ್ಕಳಲ್ಲ ಎಂದು ತಿಳಿದಿದ್ದರೂ ಅವಳನ್ನು ಢಾಬಾದಲ್ಲಿ ಕೆಲಸಕ್ಕೆ ನಿಯೋಜಿಸಿ, ಹಣವನ್ನೂ ಪಡೆದುಕೊಂಡಿದ್ದಾನೆ ಎಂಬುದು ಮೇಲ್ಮೋಟಕ್ಕೆ ಸ್ಪಷ್ಟವಾಗಿ ತಿಳಿದುಬರುತ್ತದೆ. ಈ ತರನಾಗಿ ಹೀನಕೃತ್ಯ ಎಸಗಿರುವ ಮುಖೇನ ಅರ್ಜಿದಾರರು ಕ್ಷಮಿಸಲಾರ್ಹವಲ್ಲದ ತಪ್ಪೆಸಗಿದ್ದಾರೆ ಎಂದು ಪೀಠ ಹೆಳಿದೆ.
ಅಲ್ಲದೆ, ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತೆ ಮೇಲ್ಮನವಿದಾರರಂತಹ ಪ್ರಬಲ ವ್ಯಕ್ತಿಗಳಿಂದ ಸುಲಭವಾಗಿ ಶೋಷಣೆಗೊಳಗಾಗುತ್ತಾರೆ. ಹೀಗಾಗಿ, ಸಮಾಜದ ದುರ್ಬಲ ವರ್ಗಗಳಿಗೆ ಸೇರಿದ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಹೆಚ್ಚು ಜಾಗರೂಕರನ್ನಾಗಿಸಲು ಸಮಾಜಕ್ಕೆ ಬಲವಾದ ಸಂದೇಶ ನೀಡಲು ಇದು ಸೂಕ್ತ ಸಮಯವಾಗಿದೆ ಎಂದು ತಿಳಿಸಿರುವ ನ್ಯಾಯಪೀಠ, ಅಪ್ರಾಪ್ತೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ.