

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಡೆಂಘೆ ಜ್ವರ ಪ್ರಕರಣಗಳ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ರಿಜಿಸ್ಟ್ರಾರ್ ಜನರಲ್‌ಗೆ ಆದೇಶಿಸಿದೆ. ಜತೆಗೆ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿಗೊಳಿಸಿದೆ.
ಬುಧವಾರ ಬೆಳಗ್ಗೆ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ವಿಭಾಗೀಯ ಪೀಠ ಈ ವಿಷಯ ಪ್ರಸ್ತಾಪಿಸಿತು.
ಡೆಂಘೆ ಹೆಚ್ಚಳ ಸಂಬಂಧ ರಾಜ್ಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕಾದ ಅಗತ್ಯವಿದೆ ಎಂಬುದಾಗಿ ಆಂಗ್ಲ ಪತ್ರಿಕೆಯೊಂದಕ್ಕೆ ರಾಯಚೂರಿನ ವ್ಯಕ್ತಿಯೊಬ್ಬರು ಬರೆದಿದ್ದ ಪತ್ರದ ಅಂಕಣದ ವರದಿಯನ್ನು ಪ್ರಸ್ತಾಪಿಸಿದರು. ಜತೆಗೆ, ಇತರೆ ಪತ್ರಿಕೆಗಳ ವರದಿಯನ್ನು ಉಲ್ಲೇಖಿಸಿ ಅರ್ಜಿ ದಾಖಲಿಸಿಕೊಂಡಿತು.
ಅಲ್ಲದೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ತುರ್ತು ನೋಟಿಸ್ ಜಾರಿಗೊಳಿಸಿ, ಜುಲೈ 23ರೊಳಗೆ ಡೆಂಘೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ರಿಜಿಸ್ಟ್ರಾರ್ ಜನರಲ್ ಅವರನ್ನು ಉದ್ದೇಶಿಸಿ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಸರ್ಕಾರದ ಎಲ್ಲ ಪ್ರಾಧಿಕಾರಗಳಿಗೆ ಅರ್ಜಿ ಸಲ್ಲಿಕೆಗೆ ಇರುವ ಪ್ರಕ್ರಿಯೆಗಳು ಪೂರ್ಣಗೊಳ್ಳದಿದ್ದರೂ ಇಂದೇ ನೋಟಿಸ್ ತಲುಪುವಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದೆ
ಈ ವೇಳೆ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಡೆಂಘೆ ನಿಯಂತ್ರಣ ಮತ್ತು ಆರೋಗ್ಯ ಸೌಲಭ್ಯಗಳ ಕುರಿತಂತೆ ರಾಜ್ಯ ಸರ್ಕಾರ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಭರವಸೆ ನೀಡಿದರು.
ಸಂಪೂರ್ಣ ವಿವರ ನೀಡಿ
ಉತ್ತಮ ವಾತಾವರಣದಲ್ಲಿ ಬದುಕುವುದು ಸಂವಿಧಾನ ಪರಿಚ್ಛೇದ 21ರ ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ. ಬೆಂಗಳೂರು ನಗರ ಸೇರಿ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಿ ಡೆಂಘೆ ಹರಡದಂತೆ ತಡೆಯಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು, ಬೆಂಗಳೂರು ನಗರ ಸೇರಿ ರಾಜ್ಯಾದ್ಯಂತ ಡೆಂಘೆ ರೋಗಿಗಳಿಗಾಗಿ ಒದಗಿಸಿರುವ ವೈದ್ಯಕೀಯ ಮೂಲ ಸೌಲಭ್ಯಗಳ ಕುರಿತ ಸಂಪೂರ್ಣ ವಿವರ, ಈ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೈಗೊಂಡಿರುವ ಕ್ರಮಗಳು. ಸೊಳ್ಳೆಗಳ ಸಂಖ್ಯೆ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳು ಕುರಿತು ವಿವರಣೆ ನೀಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.